ಬೇಲೂರು : ಬೇಲೂರು ತಾಲೂಕು ಅರೇಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಲಯನ್ಸ್ ಸಂಸ್ಥೆ,ಯೋಗ ಚೇತನ ಕೇಂದ್ರ ಹಾಗೂ ಶಿವಕುಮಾರ ಸ್ವಾಮೀಜಿ ಭಕ್ತ ವೃಂದದ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿತ್ತು.
ಬೇಲೂರು ತಾಲೂಕು ಅರೇಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಲಯನ್ಸ್ ಸೇವಾ ಸಂಸ್ಥೆ, ಯೋಗ ಚೇತನ ಕೇಂದ್ರ ಅಡಗೂರು ಹಾಗೂ ಶಿವಕುಮಾರ ಸ್ವಾಮೀಜಿಯವರ ಭಕ್ತ ವೃಂದ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಈ ಶಿಬಿರವನ್ನು ಉದ್ದೇಶಿಸಿ ಲಯನ್ಸ್ ಅಧ್ಯಕ್ಷೆ ಲ.ರಶ್ಮಿ ಸೋಮಯ್ಯ ಮಾತನಾಡಿ, ಹಾಸನದ ಜೀವ ಸಂಜೀವಿನಿ ರಕ್ತದಾನ ಕೇಂದ್ರ,ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಹಾಗೂ ಅಮ್ಮ ಕಣ್ಣಿನ ಆಸ್ಪತ್ರೆಯ ಸಹಕಾರದಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಸಾರ್ವಜನಿಕರು ಬಹಳ ಆಸಕ್ತಿಯಿಂದ ಈ ಶಿಬಿರದಲ್ಲಿ ಪಾಲ್ಗೊಂಡು ೩೮ ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ.
8೦ ಜನರ ಕಣ್ಣಿನ ತಪಾಸಣೆ ನಡೆಸಿ ೦೫ ರೋಗಿಗಳು ಉಚಿತ ಕಣ್ಣಿನ ಶಸ್ತç ಚಿಕಿತ್ಸೆಗಾಗಿ ಆಸ್ಪತ್ರೆಗೆ
ತೆರಳಿದ್ದು 75 ಮಂದಿ ಉಚಿತ ಆಯುರ್ವೇದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದರು.
ಯೋಗ ಗುರು ಚೇತನ್ ಗುರೂಜಿ ಮಾತನಾಡಿ, ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಲಯನ್ಸ್ ಸೇವಾ ಸಂಸ್ಥೆ ಆರೋಗ್ಯ ಶಿಬಿರವನ್ನು ಆಯೋಜಿಸಿದೆ. ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವ ನಿಟ್ಟಿನಲ್ಲಿ ಯೋಗ ಶಿಬಿರವನ್ನು ಸಹ ಆರಂಭಿಸಲಾಗಿದ್ದು ಇಂತಹ ಶಿಬಿರಗಳ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಈ ವೇಳೆ ವೈದ್ಯಾಧಿಕಾರಿ ಡಾ.ಅನುಪಮಾ, ಪಿಎಸ್ಸೈ ಶೋಭ, ವೀರಶೈವ ಘಟಕದ ಹೋಬಳಿ ಅಧ್ಯಕ್ಷ ತೇಜ್ಪಾಲ್, ಲಯನ್ಸ್ ವಲಯಾಧ್ಯಕ್ಷ ಚಾಮರಾಜ್, ಕಾರ್ಯದರ್ಶಿ ಬೃಂದನ್, ಖಜಾಂಚಿ ಸೌಜನ್ಯ, ಪ್ರಕಾಶ್ ವೀರಶೈವ ನಿರ್ದೇಶಕರು, ಲಿಖಿತ್ ವೀರಶೈವ ಯುವಘಟಕದ ನಿರ್ದೇಶಕರು ಲಯನ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ವಿವಿಧ ಆಸ್ಪತ್ರೆಗಳ ವೈದ್ಯರು ಇದ್ದರು.
