ಶ್ಲೋಕ – 15
ಜ್ಞಾನಯಜ್ಞೇನ ಚಾಪ್ಯನ್ಯೇ ಯಜಂತೋ ಮಾಮುಪಾಸತೇ ।
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತೋಮುಖಮ್ ॥೧೫॥
ಜ್ಞಾನಯಜ್ಞೇನ ಚ ಅಪಿ ಅನ್ಯೇ ಯಜಂತಃ ಮಾಮ್ ಉಪಾಸತೇ ।
ಏಕತ್ವೇನ ಪೃಥಕ್ ತ್ವೇನ ಬಹುಧಾ ವಿಶ್ವತಃ ಮುಖಮ್-ಕೆಲವರು ಅರಿವಿನ ಮಾನಸ ಯಜ್ಞದಿಂದ ಎಲ್ಲೆಡೆ ತುಂಬಿರುವ ನನ್ನನ್ನು ಪೂಜಿಸುತ್ತ ಸೇವಿಸುತ್ತಾರೆ- ಎಲ್ಲೆಡೆಯಿರುವ ಭಗವಂತನೊಬ್ಬನೆ ಎಂದು[ಏಕಮೂರ್ತಿಯೆಂದು], ಎಲ್ಲಕ್ಕಿಂತ ಬೇರೆಯೆಂದು[ಚತುರ್ಮೂರ್ತಿಯೆಂದು], ಬಗೆಬಗೆಯ ಬಣ್ಣದವನೆಂದು [ಅನೇಕಮೂರ್ತಿ ಯೆಂದು], ಹೀಗೆ ಹಲವಾರು ಬಗೆಯಿಂದ.
ಇನ್ನು ಕೆಲವರು ಭಗವಂತನ ಅರಿವಿನ ಪ್ರಪಂಚದಲ್ಲಿ ಮುಳುಗಿಬಿಟ್ಟಿರುತ್ತಾರೆ. ಧ್ಯಾನದಲ್ಲಿ ಅವರಿಗೆ ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ. ಧ್ಯಾನದಲ್ಲಿ ಭಗವಂತನನ್ನು ಅನೇಕ ಆಯಾಮದಲ್ಲಿ ಕಾಣುವುದೇ ಅವರ ಉಪಾಸನೆ. ಇವರ ಉಪಾಸನೆ ಧ್ಯಾನ ಪೂರ್ವಕವಾದ ಯಜ್ಞ. ಬಾಹ್ಯವಾಗಿ ಇವರನ್ನು ಮಹಾತ್ಮರು ಎಂದು ಗುರುತಿಸುವುದು ಬಹಳ ಕಷ್ಟ. ಕೃಷ್ಣ ಹೇಳುತ್ತಾನೆ “ಇಂತವರು ನನ್ನನ್ನು ಒಂದಾಗಿ, ಬೇರೆಯಾಗಿ, ಬಹುವಾಗಿ ಕಾಣುತ್ತಾರೆ” ಎಂದು. ಇಲ್ಲಿ ಏಕತ್ವೇನ ಅಂದರೆ ಭಗವಂತ ಒಬ್ಬನೆ ಎಂದು ಉಪಾಸನೆ ಮಾಡುವುದು. ಒಂದೊಂದು ದೇಶಕ್ಕೆ, ಒಂದೊಂದು ಜಾತಿಗೆ, ಒಂದೊಂದು ಮತಕ್ಕೆ ಒಬ್ಬ ದೇವರಲ್ಲ. ಎಲ್ಲರಿಗೂ ದೇವರು ಒಬ್ಬನೇ ಎಂದು ಉಪಾಸನೆ ಮಾಡುವುದು ಏಕತ್ವೇನ. ಪೃಥಕ್ತ್ವೇನ ಎಂದರೆ ಎಲ್ಲರಿಂದ ವಿಲಕ್ಷಣನಾದ ಭಗವಂತನನ್ನು ಅನೇಕ ಬಗೆಯಿಂದ ಕಾಣುವುದು. ಇವರು ಭಗವಂತನನ್ನು ಧ್ಯಾನದಲ್ಲಿ ಅನೇಕ ವರ್ಣದಿಂದ ಕಾಣುತ್ತಾರೆ. ಹೀಗೆ ವಿಶ್ವತೋಮುಖ ಭಗವಂತನನ್ನು ಏಕ ಎಂತಲೂ, ಚತುರ್ಮೂರ್ತಿ ಎಂತಲೂ, ಅನೇಕ ಮೂರ್ತಿ ಎಂತಲೂ, ಅನೇಕ ವರ್ಣದಿಂದ ಉಪಾಸನೆ ಮಾಡುತ್ತಾರೆ.
