ಹಾಸನ : ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಸರ್ಕಾರದ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧ್ಯಾ ಅವರನ್ನು ಭೇಟಿ ಮಾಡಿ, ಹಾಸನ ಜಿಲ್ಲೆಯ ಅಂಚೆ ಇಲಾಖೆ ಹಾಗೂ ದೂರಸಂಪರ್ಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.
ಹಾಸನ ಅಂಚೆ ವಿಭಾಗದಲ್ಲಿ 17 ಖಾಲಿ ಜಾಗಗಳು ಲಭ್ಯವಿದ್ದರೂ, ಅನೇಕ ಅಂಚೆ ಕಚೇರಿಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಮಸ್ಯೆಯಾಗಿ ಮುಂದುವರಿದಿದೆ ಎಂದು ಸಚಿವರ ಗಮನಕ್ಕೆ ತಂದರು. ತಾಲ್ಲೂಕು ಕೇಂದ್ರವಾದ ಆಲೂರುದಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಸೇರಿದಂತೆ, ಹಾಸನ (ಎನ್.ಆರ್. ಬಡಾವಣೆ), ಹರಳಹಳ್ಳಿ, ಬಾಗೂರು, ಗೊರೂರು, ರಾಮನಾಥಪುರ, ನುಗ್ಗೇಹಳ್ಳಿ, ಶಾಂತಿಗ್ರಾಮ, ಕಂದಲಿ, ದುದ್ದ, ಯಸಳೂರು, ಬಿಕ್ಕೋಡು, ಪಾಳ್ಯ, ಹಾನುಬಾಳು, ಹಗರೆ ಹಾಗೂ ಕೆ. ಹೊಸಕೋಟೆ ಪ್ರದೇಶಗಳಲ್ಲಿ ಸಬ್ ಪೋಸ್ಟ್ ಕಚೇರಿ ಕಟ್ಟಡಗಳಿಗೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡಾನೆ ಸಂಘರ್ಷದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ಬಲವಾದ ಮೊಬೈಲ್ ನೆಟ್ವರ್ಕ್ ವ್ಯವಸ್ಥೆ ಅಗತ್ಯವಿದೆ ಎಂದು ಮನವಿ ಮಾಡಿದರು.
ಸಾರ್ವಜನಿಕ ಸುರಕ್ಷತೆ ಮತ್ತು ಪರಿಣಾಮಕಾರಿ ಆಡಳಿತದ ದೃಷ್ಟಿಯಿಂದ 4G ಸ್ಯಾಚುರೇಷನ್ ಯೋಜನೆ ಅಡಿಯಲ್ಲಿ ದೂರಸಂಪರ್ಕ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದ ಅವರು, ಬೇಲೂರು ತಾಲೂಕಿನ ದೊಡ್ಡಸಾಲಾವರ, ಹೊಳಲು, ಬ್ಯಾದನೆ, ಕನಹಳ್ಳಿ, ನೆರ್ಲಮಕ್ಕಿ, ಅಂಕಿಹಳ್ಳಿ, ಸಕಲೇಶಪುರ ತಾಲೂಕಿನ ಈಚಲಬೀಡು, ಹಿರಿದನಹಳ್ಳಿ, ಹಾಗೂ ಆಲೂರು ತಾಲೂಕಿನ ಮಾದಿಹಳ್ಳಿ ಮತ್ತು ಹರಿಹಳ್ಳಿ ಗ್ರಾಮಗಳಲ್ಲಿ ಮೊಬೈಲ್ ಟವರ್ಗಳ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.
ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
