ಇರಾನ್ ಆಡಳಿತದೊಂದಿಗೆ ಒಪ್ಪಂದ ಮಾಡಿಕೊಳ್ಳಬಾರದು ಹಾಗೂ ಆ ದೇಶದ ಮೇಲೆ ದಾಳಿ ನಡೆಸುವಂತೆ ಆಗ್ರಹಿಸಿ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಇರಾನ್ನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಇರಾನ್ನ ಬಂದರು ನಗರ ಬುಶೇರ್ನ ನಿವಾಸಿ ಪೌರಿ ಹಾಮೀದಿ (28) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಪೌರಿ ಹಾಮೀದಿ ಅವರು 10 ನಿಮಿಷ 44 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದನ್ನು ವೀಕ್ಷಿಸುವ ವೇಳೆಗೆ ತಾವು ಜೀವಂತವಾಗಿರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ವೀಡಿಯೊದಲ್ಲಿ, ಇರಾನ್ನಾದ್ಯಂತ ಕಳೆದ ತಿಂಗಳು ನಡೆದ ಸರಕಾರ ವಿರೋಧಿ ಪ್ರತಿಭಟನೆಗಳನ್ನು ಆಡಳಿತವು ಹಿಂಸಾತ್ಮಕವಾಗಿ ದಮನಿಸಿದೆ ಎಂದು ಆರೋಪಿಸಿರುವ ಯುವಕ, “ರಶ್ಯ–ಉಕ್ರೇನ್ ಯುದ್ಧ ಹಾಗೂ ಇಸ್ರೇಲ್–ಫೆಲೆಸ್ತೀನ್ ಯುದ್ಧಕ್ಕಿಂತಲೂ ಹೆಚ್ಚಾಗಿ, ಇರಾನ್ನಲ್ಲಿ ಸುಮಾರು 40 ಸಾವಿರ ಪ್ರತಿಭಟನಕಾರರು ಹತ್ಯೆಯಾಗಿದ್ದಾರೆ” ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಅಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ ಪ್ರತಿಭಟನೆ ಮುಂದುವರಿಸುವಂತೆ ಕರೆ ನೀಡಿದ್ದರು. “ನಾವು ಅವರ ಮಾತನ್ನು ನಂಬಿದ್ದೆವು. ಆದರೆ ಶಸ್ತ್ರಾಸ್ತ್ರಗಳಿಲ್ಲದೆ ಹಾಗೂ ಬಾಹ್ಯ ಬೆಂಬಲವಿಲ್ಲದೆ ಇರಾನ್ ಆಡಳಿತದ ವಿರುದ್ಧ ಹೋರಾಟದಲ್ಲಿ ಜಯ ಸಾಧಿಸುವುದು ಅಸಾಧ್ಯ” ಎಂದು ಯುವಕ ವೀಡಿಯೊದಲ್ಲಿ ಅಭಿಪ್ರಾಯಪಟ್ಟಿದ್ದಾನೆ.
ಇರಾನ್ ಆಡಳಿತದೊಂದಿಗೆ ನಡೆಸುವ ಯಾವುದೇ ಒಪ್ಪಂದವು ಪ್ರತಿಭಟನೆಯಲ್ಲಿ ಮೃತಪಟ್ಟವರ ಮೇಲಿನ ದ್ರೋಹಕ್ಕೆ ಸಮಾನವಾಗುತ್ತದೆ ಎಂದು ಹೇಳಿರುವ ಆತ, ಅಂತಹ ಒಪ್ಪಂದಗಳು ನಡೆಯದಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಆಗ್ರಹಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಇರಾನ್ನಲ್ಲಿ ರಾಜಕೀಯ ಅಶಾಂತಿ ಹಾಗೂ ಮಾನವ ಹಕ್ಕುಗಳ ಕುರಿತ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
