ಟಿ.ನರಸೀಪುರ : ಆಯುರ್ವೇದದ ಜೊತೆ,ಜೊತೆಗೆ ಅಲೋಪಥಿಕ್ ಔಷಧಿ ನೀಡುತ್ತಾ ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಬಿಎಎಂಎಸ್ ಪದವಿ ಪಡೆದ ಆಯುಷ್ ವೈದ್ಯರ ಮೇಲೆ ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕ್ರಮ ವಹಿಸುವಂತೆ ದಸಂಸ ಜಿಲ್ಲಾ ಸಂಚಾಲಕ ಕುಕ್ಕೂರು ರಾಜು ಆಗ್ರಹಿಸಿದ್ದಾರೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಶ್ರೀ ಮಹದೇಶ್ವರ ಕಾಂಪ್ಲೆಕ್ಸ್ ನಲ್ಲಿ ಶ್ರೀ ರಾಘವೇಂದ್ರ ಕ್ಲಿನಿಕ್ ನ ಮಾಲೀಕರು ಹಾಗೂ ಬಿ ಎ ಎಂ ಎಸ್ ಪದವಿ ಪಡೆದು ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಉಮೇಶ್ ಶೆಟ್ಟಿಯವರು ಕ್ಲಿನಿಕ್ ನಲ್ಲಿ ರೋಗಿಯೊಬ್ಬರಿಗೆ ಗ್ಲುಕೋಸ್ ನೀಡಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಭೇಟಿ ನೀಡಿ ಆಯುಷ್ ವೈದ್ಯರು ಅಲೋಪಥಿಕ್ ಚಿಕಿತ್ಸೆ ನೀಡಲು ಸರ್ಕಾರ ಅನುಮತಿ ನೀಡಿದೆಯೇ ಎಂದು ಪ್ರಶ್ನಿಸಿದಾಗ ಗಲಿಬಿಲಿಗೊಂಡ ವೈದ್ಯರು ನಮ್ಮನ್ನು ಕೇಳಲು ಬೇರೆಯವರಿದ್ದಾರೆ ನೀವ್ಯಾರು…! ಎಂದು ಅಸಮರ್ಪಕ ಉತ್ತರ ನೀಡಿದರು.

ಆಗ ಆಯುಷ್ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕುಕ್ಕೂರು ರಾಜು ಪೋನ್ ಮಾಡಿ ವೈದ್ಯರ ಕರ್ತವ್ಯದ ಬಗ್ಗೆ ಪ್ರಶ್ನೆ ಮಾಡಿದಾಗ ಅವರು ಆಯುಷ್ ನಲ್ಲಿ ಅಲೋಪಥಿಕ್ ಸೇವೆ ಮಾಡಲು ಅವಕಾಶವಿಲ್ಲಾ.ಅವರ ಬಗ್ಗೆ ದೂರುಗಳಿದ್ದರೆ ಕೂಡಲೇ ನನ್ನ ಪೋನ್ ನಂಬರಿಗೆ ವಾಟ್ಸಾಪ್ ಮಾಡಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ನಂತರ ಅಲೋಪಥಿಕ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳಾದ ಡಾ.ರವಿಕುಮಾರ್ ರವರ ಗಮನಕ್ಕೆ ಪೋನ್ ಮೂಲಕ ವಿಷಯ ತಿಳಿಸಿದಾಗ ತಕ್ಷಣ ಕ್ಲಿನಿಕ್ ಗೆ ಬಂದು ಪರಿಶೀಲಿಸಿದರು.ಆ ಸಂದರ್ಭದಲ್ಲಿ ರೋಗಿಯೊಬ್ಬರಿಗೆ ಗ್ಲುಕೋಸ್ ಬಾಟಲ್ ಹಾಕಿ ಚಿಕಿತ್ಸೆ ನೀಡುತ್ತಿರುವುದನ್ನು ಕಣ್ಣಾರೆ ಕಂಡು ಆಯುಷ್ ವೈದ್ಯರನ್ನು ನಿಮಗೆ ಅಲೋಪಥಿಕ್ ಚಿಕಿತ್ಸೆ ನೀಡಲು ಅನುಮತಿ ಕೊಟ್ಟಿರುವುದು ಯಾರು ಎಂದು ಪ್ರಶ್ನೆ ಮಾಡಿ ನಿಮಗೆ ಈಗಾಗಲೇ ಎಚ್ಚರಿಸಿರುವುದನ್ನು ಜ್ಞಾಪಿಸಿ ಪುನಃ ಪುನರಾವರ್ತನೆ ಮಾಡಿರುವುದು ಸರಿಯಲ್ಲ ಎಂದು ನೋಟೀಸ್ ನೀಡಿ ನಿಮ್ಮ ಮೇಲೆ ಕ್ರಮ ವಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಲಾಗುವುದೆಂದರು.

ಈ ಹಿಂದೆ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ಇರುವ ಆಯುಷ್ ವೈದ್ಯರೊಬ್ಬರು ಚಿಕಿತ್ಸೆ ನೀಡಿ ರೋಗಿಯೊಬ್ಬರು ಸಾವನ್ನಪ್ಪಿದ್ದರೆಂದು ದೊಡ್ಡ ಸುದ್ದಿಯಾಗಿತ್ತು.ಆಯುರ್ವೇದ ವೈದ್ಯರು ಅಲೋಪಥಿಕ್ ಔಷಧಿ ನೀಡಿ ಹಲವಾರು ರೋಗಿಗಳಲ್ಲಿ ಅಡ್ಡ ಪರಿಣಾಮಗಳನ್ನು ಉಂಟು ಮಾಡಿ ಸಾವು ಕೂಡ ಸಂಭವಿಸಿರುವುದು ನಮ್ಮ ಕಣ್ಣ ಮುಂದೆಯೇ ಇದೆ.ಅಮಾಯಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡಬಾರದೆಂಬುದು ನಮ್ಮ ದಸಂಸ ಕಳಕಳಿ ಎಂದು ಕುಕ್ಕೂರು ರಾಜು ತಿಳಿಸಿದರು.

ತಾಲ್ಲೂಕಿನಲ್ಲಿ 14 ಕ್ಕಿಂತ ಹೆಚ್ಚು ಆಯುಷ್ ಕ್ಲಿನಿಕ್ ಗಳು ಸೇವೆ ನೀಡುತ್ತಿದ್ದು ಕೆಲವು ಕಡೆ ಆಯುರ್ವೇದ ಜೊತೆ,ಜೊತೆಗೆ ಅಲೋಪಥಿಕ್ ಮೆಡಿಷನ್ ನೀಡುತ್ತಾ ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಗಮನಕ್ಕೆ ಬಂದಿದೆ.ಇವರೇನು ಎಂಬಿಬಿಎಸ್ ಪದವಿ ಪಡೆದ ವೈದ್ಯರಾ…!ಸ್ಟಿರಾಯಿಡ್ ಮಾತ್ರೆ ಕೊಟ್ಟಾಗ ಅಡ್ಡ ಪರಿಣಾಮಗಳಾಗಿರುವ ಎಷ್ಟೋ ಉದಾಹರಣೆಗಳಿವೆ.ಇದರ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಇರುವ ಆಯುಷ್ ಮೇಲಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ…!
ಕುಕ್ಕೂರು ರಾಜು
ಜಿಲ್ಲಾ ಸಂಚಾಲಕ
ದಸಂಸ
-ಎಂ.ನಾಗೇಂದ್ರಕುಮಾರ್
