ಹಾಸನ: ರಾಜ್ಯದಲ್ಲಿ ಸಾರ್ವಜನಿಕರಿಗೆ ಆಹಾರ ಧಾನ್ಯಗಳು ಸಮೀಪದಲ್ಲೇ ಲಭ್ಯವಾಗುವಂತೆ ಹೊಸದಾಗಿ 210 ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಒಟ್ಟು 5.64 ಲಕ್ಷ ಬಿಪಿಎಲ್ ಕಾರ್ಡ್ಗಳಿದ್ದು, ಅವುಗಳಲ್ಲಿ ಶೇಕಡಾ 82ರಷ್ಟು ಕಾರ್ಡ್ಗಳಿಗೆ ನಿಯಮಿತವಾಗಿ ದವಸ-ಧಾನ್ಯ ವಿತರಣೆ ನಡೆಯುತ್ತಿದೆ ಎಂದರು. ಕೇಂದ್ರ ಸರ್ಕಾರ ಪ್ರತಿ ಸದಸ್ಯರಿಗೆ ಐದು ಕೆಜಿ ಅಕ್ಕಿ ನೀಡುತ್ತಿದ್ದರೆ, ರಾಜ್ಯ ಸರ್ಕಾರವೂ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡುತ್ತಿದೆ. ಈ ಮೂಲಕ ಪ್ರತಿ ಫಲಾನುಭವಿಗೆ ಒಟ್ಟು 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
‘ಅನ್ನ ಸುವಿಧಾ ಯೋಜನೆ’ ಜಾರಿ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನ ಸುವಿಧಾ ಯೋಜನೆ ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ 15 ಸಾವಿರ ಕಾರ್ಡ್ಗಳು ಒಳಗೊಂಡಿದ್ದು, ಪ್ರಥಮ ಹಂತದಲ್ಲಿ 2 ಸಾವಿರ ಕಾರ್ಡ್ಗಳಿಗೆ ಪ್ರಯೋಜನ ನೀಡಲಾಗುತ್ತದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ತಲುಪಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಏಳು ಲಕ್ಷ ಎಪಿಎಲ್ ಕಾರ್ಡ್ಗಳಿಗೆ ಅರ್ಹರಾಗಬೇಕಾದವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಗಿದ್ದು, ಹಾಸನ ಜಿಲ್ಲೆಯಲ್ಲಿ 22,392 ಕಾರ್ಡ್ಗಳ ಪರಿಶೀಲನೆ ಹಾಗೂ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ರಾಗಿ ಖರೀದಿ ಕೇಂದ್ರ ಆರಂಭ
ಹಾಸನ ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷ 10 ಸಾವಿರ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡುವ ಗುರಿ ಇಡಲಾಗಿದೆ. ಈಗಾಗಲೇ 44,258 ರೈತರು ನೋಂದಣಿ ಮಾಡಿಕೊಂಡಿದ್ದು, ಸುಮಾರು 80 ಶೇಕಡಾ ರೈತರು ರಾಗಿ ಮಾರಾಟಕ್ಕೆ ಆಗಮಿಸುವ ನಿರೀಕ್ಷೆ ಇದೆ. ಉತ್ತಮ ಗುಣಮಟ್ಟದ ರಾಗಿ ನೀಡುವಂತೆ ಸಚಿವರು ರೈತರಿಗೆ ಮನವಿ ಮಾಡಿದರು.
‘ಇಂದಿರಾ ಕಿಟ್’ ವಿತರಣೆ ಶೀಘ್ರ
‘ಇಂದಿರಾ ಕಿಟ್’ ವಿತರಣೆ ಕುರಿತು ಮಾತನಾಡಿದ ಸಚಿವರು, ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ವಿತರಣೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ರಾಜ್ಯ ಮಟ್ಟದಲ್ಲಿ ಒಟ್ಟು 1.25 ಕೋಟಿ ಫುಡ್ ಕಿಟ್ಗಳನ್ನು ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದರು.
