ಹಾಸನ: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಶನಿವಾರ (14.02.2026) ಪುಲ್ವಾಮಾ ದಾಳಿಯ 7ನೇ ವರ್ಷದ ಕರಾಳ ದಿನವನ್ನು ಆಚರಿಸಿ ಹುತಾತ್ಮ ವೀರಯೋಧರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಮಂದಿ ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) ವೀರಯೋಧರ ಸ್ಮರಣಾರ್ಥ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾವಪೂರ್ಣ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಹೆಚ್.ಪಿ. ಕಿರಣ್ ಅವರು, ಫೆಬ್ರವರಿ 14 ಭಾರತಕ್ಕೆ ದುಃಖತಪ್ತ ಸ್ಮರಣೆಯ ದಿನವಾಗಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದರು. ದೇಶ, ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ನಾವು ಎಲ್ಲರೂ ಕಟಿಬದ್ದರಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡುವ ಮೂಲಕ ವೀರಯೋಧರಿಗೆ ಗೌರವ ಸಲ್ಲಿಸಿದರು. 40 ಮಂದಿ ಯೋಧರ ಸಂಕೇತವಾಗಿ 40 ದೀಪಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 10ನೇ ತರಗತಿಯ ನಕ್ಷತ್ರ ಮತ್ತು ಅಹಾನಾ ದತ್ತ ಪುಲ್ವಾಮಾ ದಾಳಿಯ ಹಿನ್ನೆಲೆಯ ಬಗ್ಗೆ ಮಾತನಾಡಿದರೆ, 9ನೇ ತರಗತಿಯ ಇಶಾಂತ್ ಎಂ. ಭಾರತೀಯ ಸೈನ್ಯದ ಕಾರ್ಯಾಚರಣೆ ಮತ್ತು ದೇಶರಕ್ಷಣೆಯ ಮಹತ್ವವನ್ನು ವಿವರಿಸಿದರು.
ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಮಾತನಾಡಿ, ದೇಶದ ಭದ್ರತೆ ಮತ್ತು ಶಾಂತಿ ಸುವ್ಯವಸ್ಥೆಗೆ ನಮ್ಮ ಸೈನಿಕರ ಸೇವೆ ಅಪಾರವಾಗಿದ್ದು, ಅವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಯೋಧಗೀತೆ, ದೇಶಭಕ್ತಿಗೀತೆ, ರಾಷ್ಟ್ರಗೀತೆ ಹಾಗೂ ನುಡಿನಮನ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
