ಮಂಗಳೂರು, ಫೆಬ್ರವರಿ 14: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಪಿಲಿಕುಳ ಮೃಗಾಲಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 150ಕ್ಕೂ ಹೆಚ್ಚು ವನ್ಯಜೀವಿಗಳು ಸಾವನ್ನಪ್ಪಿರುವ ಸಂಗತಿ ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಮೃತಪಟ್ಟ ಜಿಂಕೆಯೊಂದರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೇಡ್ ಹಾಗೂ ನೈಟ್ರೇಟ್ ಅಂಶಗಳು ಪತ್ತೆಯಾಗಿರುವುದು ಬೆಚ್ಚಿಬೀಳಿಸುವ ಬೆಳವಣಿಗೆಯಾಗಿದೆ.
ಮಂಗಳೂರು ಸಮೀಪದ ಈ ಮೃಗಾಲಯದಲ್ಲಿ ಪ್ರಾಣಿಗಳ ಸಾವಿಗೆ ವಿಷಪೂರಿತ ಆಹಾರವೇ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಹಾಗೂ ಪ್ರಾಣಿ ಪ್ರೇಮಿಗಳು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕೀಟನಾಶಕ ಅವಶೇಷಗಳಿಂದ ‘ಸ್ಲೋ ಪಾಯಿಸನಿಂಗ್’ ಶಂಕೆ
ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ಬಂದ ವರದಿ ಪ್ರಕಾರ, ಮೃಗಾಲಯದಲ್ಲಿ ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಎಲೆಕೋಸು ಮತ್ತು ಹೂಕೋಸು ಬೆಳೆಗಳಲ್ಲಿ ಅತಿಯಾದ ಕೀಟನಾಶಕ ಅವಶೇಷಗಳು ಇದ್ದಿರುವ ಸಾಧ್ಯತೆ ಕಂಡುಬಂದಿದೆ. ಸರಿಯಾಗಿ ಶುಚಿಗೊಳಿಸದೇ ಆಹಾರವಾಗಿ ನೀಡಿರುವುದರಿಂದ ವಿಷಕಾರಿ ಅಂಶಗಳು ನಿಧಾನವಾಗಿ ದೇಹದಲ್ಲಿ ಸಂಗ್ರಹವಾಗಿ ‘ಸ್ಲೋ ಪಾಯಿಸನಿಂಗ್’ ಮೂಲಕ ಸಾವಿಗೆ ಕಾರಣವಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹುಲಿ, ಜಿಂಕೆ, ಸಾಂಬಾರ್, ಕಾಡುಹಂದಿ ಸೇರಿದಂತೆ ಹಲವು ಪ್ರಾಣಿಗಳು ಮೃತಪಟ್ಟಿರುವ ಹಿನ್ನೆಲೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆ ಮೂಡಿದೆ. ವಿಷಕಾರಿ ಅಂಶ ಪತ್ತೆಯಾದ ನಂತರ ಕ್ಯಾಬೇಜ್ ಹಾಗೂ ಕಾಲಿಫ್ಲವರ್ ಎಲೆಗಳನ್ನು ಆಹಾರವಾಗಿ ನೀಡುವುದಕ್ಕೆ ಅಧಿಕಾರಿಗಳು ತಾತ್ಕಾಲಿಕ ನಿಷೇಧ ಹೇರಿದ್ದಾರೆ.
ಹೈಕೋರ್ಟ್ ಗರಂ – ಮುಚ್ಚುವ ಎಚ್ಚರಿಕೆ
ಇದಕ್ಕೂ ಮುನ್ನ ಮೃಗಾಲಯದ ಅವ್ಯವಸ್ಥೆ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ಪ್ರಾಣಿಗಳ ದುಸ್ಥಿತಿಯನ್ನು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಪಿಂಜರಗಳ ಜಂಗು, ಅಸ್ವಚ್ಛ ಪರಿಸರ, ಸಮರ್ಪಕ ಆರೈಕೆಯ ಕೊರತೆ ಬಗ್ಗೆ ಕೋರ್ಟ್ ಕಿಡಿಕಾರಿದ್ದು, ಪರಿಸ್ಥಿತಿ ಸುಧಾರಿಸದಿದ್ದರೆ ಮೃಗಾಲಯವನ್ನು ಮುಚ್ಚುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಇನ್ನೊಂದೆಡೆ, ಡಿಸೆಂಬರ್ 2025ರಲ್ಲಿ ಮೃಗಾಲಯದ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದರೂ ನವೀಕರಣವಿಲ್ಲದೆ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವನ್ನೂ ನ್ಯಾಯಾಲಯ ವ್ಯಕ್ತಪಡಿಸಿತ್ತು.
ಸಾರ್ವಜನಿಕರಲ್ಲಿ ಆತಂಕ
ಇದೀಗ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಮೃಗಾಲಯದ ಪ್ರಾಣಿಗಳ ಸುರಕ್ಷತೆ, ಆಹಾರ ಗುಣಮಟ್ಟ ಹಾಗೂ ನಿರ್ವಹಣೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
