ನವದೆಹಲಿ (ಫೆ.17): ರೈಲು ಪ್ರಯಾಣಿಕರಿಗೆ ಮಹತ್ವದ ಬದಲಾವಣೆ ಮಾಡಿರುವ ಭಾರತೀಯ ರೈಲ್ವೆ, ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಯಿಂಟ್ನಲ್ಲಿ ರೈಲು ಏರದಿದ್ದರೆ ಆ ಸೀಟ್ ತಕ್ಷಣವೇ ರದ್ದುಪಡಿಸಿ ಕಾಯುವಿಕೆ ಪಟ್ಟಿಯಲ್ಲಿರುವವರಿಗೆ ನೀಡುವ ಹೊಸ ನಿಯಮ ಜಾರಿಗೆ ತಂದಿದೆ.
ಈ ಹೊಸ ವ್ಯವಸ್ಥೆಯ ಭಾಗವಾಗಿ ಟಿಕೆಟ್ ಪರೀಕ್ಷಕರಿಗೆ (TTE) ಹ್ಯಾಂಡ್ ಹೆಲ್ಡ್ ಟರ್ಮಿನಲ್ಗಳು (HHT ಟ್ಯಾಬ್ಲೆಟ್ಗಳು) ನೀಡಲಾಗಿದ್ದು, ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿರುವ ಮಾಹಿತಿ ತಕ್ಷಣವೇ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಖಾಲಿಯಾಗುವ ಆಸನಗಳನ್ನು ತಕ್ಷಣವೇ ವೇಟಿಂಗ್ ಲಿಸ್ಟ್ನ ಪ್ರಯಾಣಿಕರಿಗೆ ಹಂಚಿಕೆ ಮಾಡಲಾಗುತ್ತದೆ.
ಹಿಂದಿನ ವ್ಯವಸ್ಥೆಯಲ್ಲಿ, ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ಏರದಿದ್ದರೂ ಟಿಟಿಇಗಳು ಆ ಸೀಟ್ಗಳನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡುತ್ತಿದ್ದರು. ಆದರೆ ಹೊಸ ನಿಯಮದಿಂದ ಆ ಪ್ರಕ್ರಿಯೆಗೆ ಅಂತ್ಯವಿದ್ದು, ಆಸನ ಬಳಕೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸೀಟ್ನ್ನು ಬೇರೊಬ್ಬರಿಗೆ ನೀಡಿದ ನಂತರ ಮೂಲ ಪ್ರಯಾಣಿಕರಿಗೆ ಸಂದೇಶದ ಮೂಲಕ ಮಾಹಿತಿ ನೀಡಲಾಗುತ್ತದೆ. ಈ ಕ್ರಮದಿಂದ ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿಯಲ್ಲಿ ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಡಿಜಿಟಲ್ ತಂತ್ರಜ್ಞಾನ ಬಳಕೆ ಮೂಲಕ ಪ್ರಯಾಣಿಕ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ.