ಶ್ಲೋಕ
ಯಾಂತಿ ದೇವವ್ರತಾ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ॥೨೫॥
ಯಾಂತಿ ದೇವವ್ರತಾಃ ದೇವಾನ್ ಪಿತ ನ್ ಯಾಂತಿ ಪಿತೃವ್ರತಾಃ ।
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮತ್ ಯಾಜಿನಃ ಅಪಿ ಮಾಮ್-ದೇವತೆಗಳ ನೇಮ ಹಿಡಿದವರು ದೇವತೆಗಳನ್ನು ಸೇರುತ್ತಾರೆ. ಪಿತೃಗಳ ನೇಮ ಹಿಡಿದವರು ಪಿತೃಗಳನ್ನು ಸೇರುತ್ತಾರೆ. ದೆವ್ವಗಳನ್ನು ಪೂಜಿಸುವವರು ದೆವ್ವಗಳನ್ನು ಸೇರುತ್ತಾರೆ. ನನ್ನನ್ನು ಪೂಜಿಸುವವರು ನನ್ನನ್ನೇ ಸೇರುತ್ತಾರೆ.
ಕೃಷ್ಣ ಹೇಳುತ್ತಾನೆ “ನೀವು ಯಾರನ್ನು ಪೂಜಿಸುತ್ತೀರೋ ಅವರನ್ನೇ ಪಡೆಯುತ್ತೀರಿ” ಎಂದು. ದೇವತೆಗಳನ್ನು ಪೂಜಿಸುವವರು ದೇವತೆಗಳನ್ನೂ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನೂ, ಭೂತ ಪ್ರೇತವನ್ನು(ದೇವತಾ ಗಣ) ಪೂಜಿಸುವವರು ಭೂತ ಪ್ರೇತಗಳನ್ನೂ ಪಡೆಯುತ್ತಾರೆ. ಆದರೆ ಯಾರು ಏಕಭಕ್ತಿಯಿಂದ ಎಲ್ಲವುದರಲ್ಲೂ ಭಗವಂತನನ್ನು ಕಂಡು ಶ್ರದ್ಧೆಯಿಂದ ಆತನನ್ನು ಪೂಜಿಸುತ್ತಾರೋ- “ಅವರು ನನ್ನನ್ನು ಸೇರುತ್ತಾರೆ” ಎನ್ನುವ ಭರವಸೆಯನ್ನು ಇಲ್ಲಿ ಕೃಷ್ಣ ಕೊಡುತ್ತಾನೆ. ದೇವತೆಗಳನ್ನು ಪೂಜಿಸಿ ಸ್ವರ್ಗವನ್ನು ಪಡೆಯಬಹುದು, ಆದರೆ ಮರಳಿ ಹುಟ್ಟದ ಮೋಕ್ಷವನ್ನಲ್ಲ. ಯಾವ ಪೂಜೆ ಮಾಡಿದರೂ ಸರಿಯೇ, ಪ್ರತಿಯೊಂದು ಕ್ರಿಯೆಯ ಹಿಂದೆ ಭಗವಂತನ ಅರಿವಿದ್ದು ಅದರಿಂದ ಅವನನ್ನು ಆರಾಧಿಸುವುದೇ ನಿಜವಾದ ಪೂಜೆ. ಅರಿವಿಲ್ಲದ ಪೂಜೆ ಎಂದೂ ನಮ್ಮನ್ನು ಮೋಕ್ಷದತ್ತ ಕೊಂಡೊಯ್ಯುವುದಿಲ್ಲ.ಬ್ರಹ್ಮಾದಿ ಸಮಸ್ತ ದೇವತಾ ಪರಿವಾರ ಸಮೆತನಾಗಿರತಕ್ಕಂತಹ ಭಗವಂತನ ಆರಾಧನೆ ಮಾಡಿದರೆ ಆಗ ಭಗವಂತನನ್ನು ಸೇರುತ್ತಾರೆ. ಇದು ಶಾಸ್ತ್ರದ ವ್ಯವಸ್ಥೆ.
