ಹಾಸನ: ಹಾಸನ ತಾಲ್ಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಚನ್ನಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆಬ್ರವರಿ 21ರಂದು ವಿದ್ಯಾರ್ಥಿಗಳಿಗಾಗಿ ವಚನ ಗಾಯನ, ವಚನ ನೃತ್ಯ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಹಾಸನ ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗಿರಿಜಾ ನಿರ್ವಾಣಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ವಚನಗಳ ಅರಿವು ಮೂಡಿಸುವುದು ಹಾಗೂ ಸಮ ಸಮಾಜದ ಪರಿಕಲ್ಪನೆಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಶರಣೆ ಪುಷ್ಪಲತಾ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಶರಣೆ ಗಿರಿಜಾ ನಿರ್ವಾಣಿ ವಹಿಸಲಿದ್ದಾರೆ. ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಕುಮಾರಸ್ವಾಮಿ ಪ್ರಾಸ್ತಾವಿಕ ನುಡಿ ನೀಡಲಿದ್ದಾರೆ.
ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಶರಣೆ ಸೌಭಾಗ್ಯ ಅವರು “ನಿತ್ಯ ಬದುಕಿನಲ್ಲಿ ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳು” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಉಪಾಧ್ಯಕ್ಷೆ ಶರಣೆ ಬಿ.ಎಸ್. ಸುನಂದಾ ಬಹುಮಾನ ವಿತರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಶರಣ ಕಟ್ಟಾಯ ಶಿವಕುಮಾರ, ಸಕಲೇಶಪುರ ತಾಲ್ಲೂಕು ಅಧ್ಯಕ್ಷೆ ಶರಣೆ ಮೀನಾಕ್ಷಿ ಖಾದರ್, ಬೇಲೂರು ತಾಲ್ಲೂಕು ಅಧ್ಯಕ್ಷೆ ಶರಣೆ ರೇಖಾ ಪ್ರಕಾಶ್, ಅಧ್ಯಕ್ಷ ಶರಣ ಪುಟ್ಟರಾಜು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷೆ ಶರಣೆ ಗಿರಿಜಾ ನಿರ್ವಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.