ಟಿ.ನರಸೀಪುರ : ಹಲವು ದಶಕಗಳಿಂದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಬೇಡಿಕೆಯಾಗಿದ್ದ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅನುದಾನ ಬಿಡುಗಡೆ ಮಾಡಿದ್ದು ಕೆಲವು ಪರಿಸರ ಪ್ರೇಮಿಗಳು ಒಳ್ಳೆಯ ಕೆಲಸಕ್ಕೆ ಅಡ್ಡಿ ಪಡಿಸದೆ ಸಹಕಾರ ನೀಡಬೇಕೆಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ.ಬಿ.ಮರಯ್ಯ ಮನವಿ ಮಾಡಿದರು.
ಪಟ್ಟಣದ ಬೈರಾಪುರದಲ್ಲಿರುವ ದೇವಸ್ಥಾನದ ಆವರಣದಲ್ಲಿ ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ದರಾಮಯ್ಯರವರು, ಮಹದೇವಪ್ಪರವರು,ಡಾ.ಯತೀಂದ್ರ ಸಿದ್ದರಾಮಯ್ಯರವರು ಹಾಗೂ ಸುನಿಲ್ ಬೋಸ್ ರವರ ಇಚ್ಚಾಸಕ್ತಿಯ ಮೇರೆಗೆ ದಶಕಗಳ ಕೂಗಾಗಿದ್ದ ಕ್ರೀಡಾಂಗಣ ನಿರ್ಮಾಣಕ್ಕೆ ತಹಶಿಲ್ದಾರ್ ಹಾಗೂ ಸರ್ವೇ ಇಲಾಖೆ ಅಳತೆ ಮಾಡಿ ಫ್ಯಾಕ್ಟರಿಗೆ ಎಷ್ಟು ಸ್ಥಳ ಬಿಡಬೇಕು ಮತ್ತು ಕ್ರೀಡಾಂಗಣಕ್ಕೆ ಎಷ್ಟು ಜಾಗ ತೆಗೆದುಕೊಳ್ಳಬೇಕೆಂದು ಗುರುತು ಮಾಡಿದ್ದಾರೆ.
ನಮ್ಮ ಎರೆಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು ರಾಜ್ಯ,ಅಂತರಾಜ್ಯ,ದೇಶ ಹಾಗೂ ವಿದೇಶಗಳಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಗೆದ್ದು ಬೀಗಿ ಎರೆಡೂ ಕ್ಷೇತ್ರಗಳ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅಂತಹ ಅದೆಷ್ಟೋ ಕ್ರೀಡಾ ಪಟುಗಳಿಗೆ ಕ್ರೀಡಾಂಗಣದ ವ್ಯವಸ್ಥೆಯಿಲ್ಲದೆ ತೆರೆ,ಮರೆಗೆ ಸರಿಯುತ್ತಿರುವುದೂ ಇದೆ.ಇಂತಹ ಸಂದರ್ಭದಲ್ಲಿ ಎಕರೆ ಗಟ್ಟಲೆ ಸ್ಥಳಾವಕಾವಿರುವ ಸಿಲ್ಕ್ ಫ್ಯಾಕ್ಟರಿಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮೈಸೂರಿನ ಕೆಲವು ಪರಿಸರ ಪ್ರೇಮಿಗಳು ಅಡ್ಡ ಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿ.ನರಸೀಪುರ ಹಾಗೂ ವರುಣಾ ವಿಧಾನ ಸಭಾ ಕ್ಷೇತ್ರಗಳ ಕ್ರೀಡಾಪಟುಗಳು ಮತ್ತು ಸಾರ್ವಜನಿಕರೆಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಬಹಳ ವರ್ಷಗಳ ಸಾರ್ವಜನಿಕರು ಹಾಗೂ ನಮ್ಮೆಲ್ಲರ ಕೂಗಾಗಿದ್ದ ಕ್ರೀಡಾಂಗಣ ನಿರ್ಮಾಣಕ್ಕೆ ಪಟ್ಟಣದಲ್ಲಿರುವ ಸಿಲ್ಕ್ ಫ್ಯಾಕ್ಟರಿಯ ವಿಶಾಲವಾದ ಸ್ಥಳ ಸೂಕ್ತವೆಂದು ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಣ ಬಿಡುಗಡೆ ಮಾಡಿದ್ದು,ಕೆಲವು ಪರಿಸರ ಪ್ರೇಮಿಗಳು ಒಳ್ಳೆಯ ಕೆಲಸಕ್ಕೆ ಅಡ್ಡಿ ಪಡಿಸದೆ ಸಹಕಾರ ನೀಡಬೇಕೆಂದರು.
ಪರಿಸರ ಪ್ರೇಮಿಗಳಿಗೆ ಮೈಸೂರಿನಲ್ಲಿ ಹಲವಾರು ಜಾಗದಲ್ಲಿ ಪರಿಸರ ನಾಶಪಡಿಸಿ ಕಟ್ಚಿಕೊಂಡಿರುವ ಸರ್ಕಾರಿ ಕಟ್ಟಡಗಳು ಇವರ ಕಣ್ಣಿಗೆ ಕಂಡಿಲ್ಲವೇ…! ಎಂದು ಪ್ರಶ್ನಿಸಿ ಈ ಫ್ಯಾಕ್ಟರಿಯಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲವು ನೌಕರರು ಇವರನ್ನು ಎತ್ತಿ ಕಟ್ಟಿ ಪ್ರತಿಭಟಿಸುವಂತೆ ಮಾಡುತ್ತಿದ್ದು ಇಂತಹವರನ್ನು ಸರ್ಕಾರ ಕೂಡಲೇ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಸಿಲ್ಕ್ ಫ್ಯಾಕ್ಟರಿಯಲ್ಲಿ ರೇಷ್ಮೆ ನೂಲು ತೆಗೆಯುತ್ತಿದ್ದು ರೇಷ್ಮೆ ಹುಳುಗಳ ಹಾಗೂ ಕೆಮಿಕಲ್ ನ ಕೆಟ್ಟ ವಾಸನೆಯಿಂದ ಹಾಗೂ ಕಲ್ಲಿದ್ದಲಿನ ಧೂಳಿನಿಂದ ನಮ್ಮ ಗ್ರಾಮದ ಜನತೆ ಟಿ.ಬಿ.ಖಾಯಿಲೆಯಿಂದ ನರಳುತ್ತಿದ್ದಾರೆ.ಬೈರಾಪುರ ನಾಲ್ಕನೇ ವಾರ್ಡಿನ ಮನೆಗಳಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಮಕ್ಕರಿ ಧೂಳು ತುಂಬುತ್ತಿದೆ ಇದರಿಂದ ನಮ್ಮೂರಿನ ಜನತೆ ಅನಾರೋಗ್ಯದಿಂದ ಬಳಲುತ್ತಿದ್ದು ಪರಿಸರ ನಾಶವಾಗುತ್ತದೆ ಎನ್ನುವ ಕೆಲವು ಪರಿಸರ ವಾದಿಗಳು ನಮ್ಮಗಳ ಆರೋಗ್ಯದ ರಕ್ಷಣೆ ಮಾಡುವರೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಕುಳಿತಿರುವ ವಿಶ್ವನಾಥ್ ರವರು ಹಾಗೂ ಪ್ರತಾಪ್ ಸಿಂಹ ನೀವು ಡಾ.ಯತೀಂದ್ರ ಸಿದ್ದರಾಮಯ್ಯರವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಲ್ಲಾ ನಿಮಗೆ ತಾಕತ್ಚಿದ್ದರೆ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಂದು ಗೆದ್ದು ತೋರಿಸಿ. ಪ್ರತಾಪ್ ಸಿಂಹ ನೀನು ಗಡ್ಡ ಬಿಟ್ಕೊಂಡು ತಲೆ ಕೆಟ್ಟವರ ರೀತಿ ಇಲ್ಲ, ಸಲ್ಲದ ಹೇಳಿಕೆಗಳನ್ನು ನೀಡಿದರೆ ನಿನ್ನ ವಿರುದ್ಧ ಯುವ ಸಮೂಹ ಪ್ರತಿಭಟನೆ ಮಾಡಬೇಕಾಗುತ್ತದೆ.ನಿಮ್ಮ ಯಾವುದೇ ಹೇಳಿಕೆಗಳಿಗೆ ನಾವು ಬಗ್ಗೋದು ಇಲ್ಲಾ…! ಜಗ್ಗೋದು ಇಲ್ಲಾ…!
ನರಸೀಪುರದಲ್ಲಿ ಕ್ರೀಡಾಂಗಣ ನಿರ್ಮಾಣವಾಗಬಾರದೆಂದು ಬಿಜೆಪಿಯವರ ಕುತಂತ್ರವಿದೆ.ಹಾಗಾಗಿ ಸಿಲ್ಕ್ ಫ್ಯಾಕ್ಟರಿ ಸ್ಥಳದ ವಿಶಾಲವಾದ ಜಾಗದ ಮತ್ತೊಂದು ಭಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕಾಣದ ಕೈಗಳೊಂದಿಗೆ ಅಡ್ಡಿ ಪಡಿಸುತ್ತಿರುವುದು ಸ್ಪಷ್ಟವಾಗಿದೆ.ಸರ್ಕಾರ ಇದಕ್ಕೆಲ್ಲಾ ಮಣಿಯದೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಶೀಘ್ರದಲ್ಲೇ ಮುಂದಾಗಬೇಕು.
– ಡಾ.ಬಿ.ಮರಯ್ಯ
ತಾಲ್ಲೂಕು ಪಂಚಾಯತಿ
ಮಾಜಿ ಉಪಾಧ್ಯಕ್ಷರು.

ಈ ಸಂದರ್ಭದಲ್ಲಿ ಯಜಮಾನ್ ಚಿಕ್ಕಲಿಂಗಯ್ಯ,ಚಿಕ್ಕನಂಜಯ್ಯ,ಮರಯ್ಯ,ಮಹದೇವ,ಚಿನ್ನಪ್ಪ,ಎಸ್,ಮಾದಯ್ಯ,ಮಂಜು,ಮಹದೇವು,ಕುಮಾರ,ಮೈಸೂರು ಮಹದೇವ,ರಾಜೇಶ,ಮಂಜು ಅಶೋಕ,ಶಿವು,ಶಂಕ್ರ,ಅಪ್ಪು,ರವಿ,ದೊರೆ,ರಮೇಶ, ಸೇರಿದಂತೆ ಇತರರಿದ್ದರು.
ವರದಿ- ಎಂ.ನಾಗೇಂದ್ರಕುಮಾರ್
