ಅಹಮದಾಬಾದ್: ಪತಿ ಪತ್ನಿಗೆ ಒಮ್ಮೆ ಕಪಾಳಮೋಕ್ಷ ಮಾಡುವುದನ್ನು “ಕ್ರೌರ್ಯ” ಎಂದು ಪರಿಗಣಿಸಲಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣವು 1995ರಲ್ಲಿ ನಡೆದಿದ್ದು, ದಂಪತಿಗಳು ವಿವಾಹವಾದ ಬಳಿಕ ವಲ್ಸಾದ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು.
ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂತರ, ಮೃತಳ ತಂದೆ ತನ್ನ ಅಳಿಯನ ವಿರುದ್ಧ ಕ್ರೌರ್ಯ ಹಾಗೂ ಕಿರುಕುಳ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಪ್ರಕಾರ, ಪತಿ ಪಾರ್ಟಿಗಳಿಂದ ತಡವಾಗಿ ಮನೆಗೆ ಬರುತ್ತಿದ್ದು, ಪತ್ನಿಗೆ ಹಲ್ಲೆ ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು. ಒಮ್ಮೆ ಪತ್ನಿ ತನ್ನ ಪೋಷಕರಿಗೆ ತಿಳಿಸದೆ ಅವರ ಮನೆಯಲ್ಲೇ ಉಳಿದ ಕಾರಣಕ್ಕೆ ಪತಿ ಕಪಾಳಮೋಕ್ಷ ಮಾಡಿದ ಘಟನೆ ಉಲ್ಲೇಖಿಸಲಾಗಿತ್ತು.
ಪೊಲೀಸರು ಆರೋಪಿಯ ವಿರುದ್ಧ ವರದಕ್ಷಿಣೆ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸಂಬಂಧ ಪ್ರಕರಣ ದಾಖಲಿಸಿದ್ದರು. 2003ರಲ್ಲಿ ಸೆಷನ್ಸ್ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೈಲು ಶಿಕ್ಷೆ ವಿಧಿಸಿತ್ತು.
ಆದರೆ ಆರೋಪಿಯು ಈ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಆರೋಪಿಯ ಪರವಾಗಿ ತೀರ್ಪು ನೀಡಿದೆ. ಪತ್ನಿಗೆ ಕಪಾಳಮೋಕ್ಷ ಮಾಡಿದ ಒಂದೇ ಒಂದು ಘಟನೆ, ವಿಶೇಷವಾಗಿ ನಿರ್ದಿಷ್ಟ ಸಂದರ್ಭದಲ್ಲಿದ್ದರೆ, ಅದನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜೊತೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಬಗ್ಗೆ ಸಾಕಷ್ಟು ಪುರಾವೆಗಳು ಇಲ್ಲವೆಂದು ಕೂಡ ನ್ಯಾಯಾಲಯ ತಿಳಿಸಿದೆ.
ಈ ತೀರ್ಪು ಕುಟುಂಬ ಕಲಹ ಸಂಬಂಧ ಪ್ರಕರಣಗಳಲ್ಲಿ ಕಾನೂನು ವ್ಯಾಖ್ಯಾನದ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಿದೆ.
