ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ‘ತೂತು ಮಡಿಕೆ’ ಚಿತ್ರದ ನಿರ್ದೇಶಕ ಹಾಗೂ ನಟ ಚಂದ್ರಕೀರ್ತಿ ಎಂ. ಅವರು ಇದೀಗ ತಮ್ಮ ಎರಡನೇ ಚಿತ್ರದೊಂದಿಗೆ ಮರಳಿದ್ದಾರೆ. ಅವರು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಾಯಕನಾಗಿಯೂ ನಟಿಸುತ್ತಿರುವ ಹೊಸ ಸಿನಿಮಾಗೆ ‘ಕಾಫಿ ಬೈಟ್’ ಎಂದು ಶೀರ್ಷಿಕೆ ಇಡಲಾಗಿದೆ. ‘ಸ್ಪ್ರೆಡ್ ಆನ್ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಿತ್ರರಂಗದಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.

‘ಕಾಫಿ ಬೈಟ್’ ಸಂಪೂರ್ಣವಾಗಿ ರೋಮ್ಯಾಂಟಿಕ್ ಕಾಮಿಡಿ ಶೈಲಿಯ ಕಥಾಹಂದರವನ್ನು ಹೊಂದಿದೆ. ಪ್ರೀತಿಯಲ್ಲಿ ನಮ್ಮ ಸುತ್ತಮುತ್ತಲಿನ ಸಮಾಜ ಹೇಗೆ ಪ್ರಭಾವ ಬೀರುತ್ತದೆ ಮತ್ತು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಎದುರಾಗುವ ಗೊಂದಲ ಹಾಗೂ ಯೋಚನೆಗಳ ಸುತ್ತ ಈ ಕಥೆ ಸಾಗಲಿದೆ. ಈ ಸೂಕ್ಷ್ಮ ಹಾಗೂ ಗಂಭೀರ ವಿಷಯವನ್ನು ನಿರ್ದೇಶಕರು ಪಕ್ಕಾ ಮನರಂಜನೆಯ ಚೌಕಟ್ಟಿನಲ್ಲಿ ಪ್ರೇಕ್ಷಕರ ಮುಂದಿಡಲು ಹೊರಟಿದ್ದಾರೆ. ಚಿತ್ರದಲ್ಲಿ ಚಂದ್ರಕೀರ್ತಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರೊಂದಿಗೆ ಚಿತ್ರರಂಗದ ದೊಡ್ಡ ತಾರಾಗಣವೇ ಸಾಥ್ ನೀಡಿದೆ. ಪ್ರಮುಖ ಪಾತ್ರಧಾರಿಗಳ ವಿವರಗಳನ್ನು ಚಿತ್ರತಂಡ ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.

ಚಿತ್ರಕ್ಕೆ ಚಂದ್ರಕೀರ್ತಿ ಅವರೇ ಕಥೆ ಬರೆದಿದ್ದು, ತ್ರಿಲೋಕ ತ್ರಿವಿಕ್ರಮ ಮತ್ತು ಸಮೀರ ಸಿಂಹ ಅವರೊಂದಿಗೆ ಸೇರಿ ಚಿತ್ರಕಥೆ ರಚಿಸಿದ್ದಾರೆ. ತ್ರಿಲೋಕ ತ್ರಿವಿಕ್ರಮ ಸಂಭಾಷಣೆ ಹಾಗೂ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದು, ಸ್ವಾಮಿನಾಥನ್ ಆರ್. ಕೆ. ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರವನ್ನು ಮಧುಸೂದನ್ ರಾವ್, ಜ್ಯೋತಿ ವಿ. ಉಪಾಧ್ಯ, ಬಿ. ವಿನೋದ್ ಕುಮಾರ್, ಮಂಜುನಾಥ್ ಎನ್., ಮುರಳಿ ಟಿ. ಹಾಗೂ ಲೋಹಿತ್ ಎಲ್. ಎನ್. ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಬೆಂಗಳೂರು ಮತ್ತು ಹೊನ್ನಾವರ ಸೇರಿದಂತೆ ಹಲವು ನಯನಮನೋಹರ ತಾಣಗಳಲ್ಲಿ ಸರಿಸುಮಾರು 60 ರಿಂದ 70 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ. ಈಗಾಗಲೇ ಚಿತ್ರತಂಡ ಶೇಕಡಾ 20 ರಿಂದ 30ರಷ್ಟು ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಸದ್ಯ ಭರದಿಂದ ಚಿತ್ರೀಕರಣ ಮುಂದುವರಿದಿದ್ದು, ‘ಕಾಫಿ ಬೈಟ್’ ಸಿನಿಮಾವನ್ನು 2027ರ ಜನವರಿ ಅಥವಾ ಫೆಬ್ರವರಿಯಲ್ಲಿ ಬೆಳ್ಳಿಪರದೆಗೆ ತರಲು ತಂಡ ಭರ್ಜರಿ ಸಿದ್ಧತೆ ನಡೆಸುತ್ತಿದೆ.
–ಶ್ರೀ ಸಾಯಿ ಎಸ್ ಮಂಜು
