ವಾಷಿಂಗ್ಟನ್ (ಫೆ.21): ಅಮೆರಿಕದ ಸುಪ್ರೀಂ ಕೋರ್ಟ್ ತಮ್ಮ ಹಿಂದಿನ ಸುಂಕ ಆದೇಶಗಳನ್ನು ಅಸಿಂಧುಗೊಳಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲಾ ದೇಶಗಳಿಂದ ಬರುವ ಆಮದುಗಳ ಮೇಲೆ ಶೇ.10ರಷ್ಟು ಜಾಗತಿಕ ಸುಂಕ (Tariff) ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ.
ಶ್ವೇತಭವನದ ಓವಲ್ ಆಫೀಸ್ನಲ್ಲಿ ಈ ಆದೇಶಕ್ಕೆ ಸಹಿ ಹಾಕಿರುವುದಾಗಿ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. “ಎಲ್ಲಾ ರಾಷ್ಟ್ರಗಳ ಮೇಲೆ ಶೇ.10ರಷ್ಟು ಜಾಗತಿಕ ಸುಂಕ ವಿಧಿಸುವ ಆದೇಶಕ್ಕೆ ಸಹಿ ಹಾಕಿರುವುದು ನನ್ನ ಪಾಲಿನ ದೊಡ್ಡ ಗೌರವ” ಎಂದು ಅವರು ಬರೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪು ನಂತರ ಹೊಸ ಕಾನೂನು ಅಸ್ತ್ರ
ಅಮೆರಿಕದ ಸುಪ್ರೀಂ ಕೋರ್ಟ್ ಅಧ್ಯಕ್ಷರಿಗೆ ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (IEEPA) ಬಳಸಿ ವ್ಯಾಪಕ ಸುಂಕ ವಿಧಿಸುವ ಅಧಿಕಾರ ಇಲ್ಲ ಎಂದು 6–3 ಮತಗಳ ಅಂತರದಲ್ಲಿ ತೀರ್ಪು ನೀಡಿತ್ತು. ಇದರಿಂದ ಟ್ರಂಪ್ ಅವರ ಆರ್ಥಿಕ ನೀತಿಗೆ ದೊಡ್ಡ ಹೊಡೆತ ಬಿದ್ದಿತ್ತು.
ಆದರೆ ಇದೀಗ ಅವರು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಅನ್ನು ಬಳಸಿಕೊಂಡು 150 ದಿನಗಳವರೆಗೆ ತಾತ್ಕಾಲಿಕ ಸುಂಕ ವಿಧಿಸುವ ಮಾರ್ಗವನ್ನು ಅನುಸರಿಸಿದ್ದಾರೆ. ಇದನ್ನು ಮುಂದುವರಿಸಲು ಕಾಂಗ್ರೆಸ್ ಅನುಮೋದನೆ ಅಗತ್ಯವಿರುತ್ತದೆ.
ನ್ಯಾಯಾಧೀಶರ ವಿರುದ್ಧ ಟ್ರಂಪ್ ಆಕ್ರೋಶ
ತಮ್ಮ ಸುಂಕ ನೀತಿಗೆ ವಿರೋಧ ವ್ಯಕ್ತಪಡಿಸಿದ ನ್ಯಾಯಾಧೀಶರ ವಿರುದ್ಧ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದು, ನ್ಯಾಯಾಲಯದ ತೀರ್ಪು ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ. ಸುಂಕಗಳಿಂದ ರಾಷ್ಟ್ರೀಯ ಭದ್ರತೆ ಬಲವಾಗಿದ್ದು, ಫೆಂಟಾನಿಲ್ ಸೇರಿದಂತೆ ಮಾದಕ ದ್ರವ್ಯಗಳ ಅಕ್ರಮ ಹರಿವು ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಥಿಕ ಪರಿಣಾಮಗಳ ಅಂದಾಜು
ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಈ ಕ್ರಮ ಅಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಕೂಡ 2026ರಲ್ಲಿ ಸರ್ಕಾರದ ಸುಂಕ ಆದಾಯದಲ್ಲಿ ದೊಡ್ಡ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹೊಸ ಸುಂಕ ನೀತಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳು ಮುಂದಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
