ಶ್ಲೋಕ – 31
ಕ್ಷಿಪ್ರಂ ಭವತಿ ಧರ್ಮಾತ್ಮಾ ಶಶ್ವಚ್ಛಾನ್ತಿಂ ನಿಗಚ್ಛತಿ ।
ಕೌಂತೇಯ ಪ್ರತಿಜಾನೀಹಿ ನ ಮೇ ಭಕ್ತಃ ಪ್ರಣಶ್ಯತಿ ॥೩೧॥
ಅವನು ಒಡನೆಯೆ ಸರಿದಾರಿ ಹಿಡಿಯುತ್ತಾನೆ; ಅಳಿವಿರದ ಸುಖದ ಸೆಲೆಯನ್ನು ಪಡೆಯುತ್ತಾನೆ. ಕೌಂತೇಯ, ಇದನ್ನು ಆಣೆಯಿಟ್ಟಾಡು: ‘ನನ್ನ ಭಕ್ತನೆಂದೂ ಕೆಡುವುದಿಲ್ಲ’.
ಹೀಗೆ ಪ್ರರಾಬ್ಧ ಕರ್ಮದಿಂದ ದಾರಿತಪ್ಪಿದವರು ಯಾವುದೋ ಒಂದು ಸಂದರ್ಭದಲ್ಲಿ ಒಡನೆಯೇ ತಾವು ಮಾಡುತ್ತಿರುವ ತಪ್ಪಿನ ಅರಿವಾಗಿ ಸರಿದಾರಿಯನ್ನು ಹಿಡಿಯುತ್ತಾನೆ, ಮತ್ತು ಅಳಿವಿರದ ಮೋಕ್ಷವನ್ನು ಸೇರುತ್ತಾನೆ. ಇದು ನಿಶ್ಚಿತ. ಇದನ್ನು ನೀನು ಆಣೆಮಾಡಿ ಹೇಳು ಎನ್ನುತ್ತಾನೆ ಕೃಷ್ಣ. ಇದಕ್ಕೆ ಉತ್ತಮ ಉದಾಹರಣೆ ಅಜಾಮಿಳನ ಕಥೆ. ತನ್ನ ಜೀವನದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿದ ಅಜಾಮಿಳ ಮೂಲತಃ ಒಬ್ಬ ಶ್ರೇಷ್ಠ ಜೀವ. ಇಂತಹ ಅಜಾಮಿಳನಿಗೆ ಭಗವಂತ ಜೀವನದ ಕೊನೆಗಾಲದಲ್ಲಿ ಸತ್ಯದ ದಾರಿ ತೋರಿಸಿ ಉದ್ಧಾರ ಮಾಡುತ್ತಾನೆ. ಆತ ತನ್ನ ಕೊನೆಗಾಲದಲ್ಲಿ ಸಾಧನೆ ಮಾಡಿ ಮೋಕ್ಷವನ್ನು ಸೇರುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನಲ್ಲಿ ಏಕೆ “ನೀನು ಪ್ರತಿಜ್ಞೆ ಮಾಡು” ಎಂದು ಹೇಳುತ್ತಾನೆ ಎಂದರೆ-ಭಗವಂತ ಭಕ್ತರಿಗಾಗಿ ತನ್ನ ಪ್ರತಿಜ್ಞೆಯನ್ನು ಮುರಿದಾನು ಆದರೆ ಎಂದೂ ಭಕ್ತರ ಪ್ರತಿಜ್ಞೆಯನ್ನಲ್ಲ. ಇದಕ್ಕೆ ಉದಾಹರಣೆ ಮಹಾಭಾರತ ಯುದ್ಧದಲ್ಲಿ ನಡೆದ ಒಂದು ಘಟನೆ:
ಮಹಾಭಾರತ ಯುದ್ಧದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ, ಯುದ್ಧದ ನಡುವೆ ಅರ್ಜುನ ಭೀಷ್ಮನ ಎದುರು ಯುದ್ಧ ಮಾಡುವುದಕ್ಕೆ ಹಿಂಜರಿದಾಗ, ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ರಥದಚಕ್ರವೊಂದನ್ನು ಹಿಡಿದು ಮುಂದೊತ್ತಿ ಬರುತ್ತಾನೆ! ಇದನ್ನು ನೋಡಿದ ಬೀಷ್ಮ ತನ್ನ ಎರಡೂ ಕೈಗಳನ್ನು ಜೋಡಿಸಿ ಹೀಗೆ ಹೇಳುತ್ತಾನೆ: ” ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ನೀನು ಮರೆತಿರುವೆ, ಆದರೆ ನಿನ್ನ ಭಕ್ತನ ಪ್ರತಿಜ್ಞೆಯನ್ನಲ್ಲ; ನೀನಲ್ಲದೆ ನಮಗೆ ಗತಿ ಇನ್ಯಾರು?” ಎಂದು. ಈ ಘಟನೆಯಲ್ಲಿ ಭಗವಂತ ಎಂತಹ ಭಕ್ತವತ್ಸಲ ಎನ್ನುವುದು ತಿಳಿಯುತ್ತದೆ.
