ಶ್ಲೋಕ – 33
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ ರಾಜರ್ಷಯಸ್ತಥಾ ।
ಅನಿತ್ಯಮಸುಖಂ ಲೋಕಮಿಮಂ ಪ್ರಾಪ್ಯ ಭಜಸ್ವ ಮಾಮ್ ॥೩೩॥
ಕಿಮ್ ಪುನಃ ಬ್ರಾಹ್ಮಣಾಃ ಪುಣ್ಯಾಃ ಭಕ್ತಾಃ ರಾಜ ಋಷಯಃ ತಥಾ ।
ಅನಿತ್ಯಮ್ ಅಸುಖಮ್ ಲೋಕಮ್ ಇಮಮ್ ಪ್ರಾಪ್ಯ ಭಜಸ್ವ ಮಾಮ್-ಪುಣ್ಯದ ಫಲದಿಂದ ಬ್ರಾಹ್ಮಣರಾಗಿ, ಋಷಿಗಳಂಥ ಅರಸರಾಗಿ ಹುಟ್ಟಿ ಬಂದು ಭಕ್ತಿ ಮಾಡುವವರ ಬಗೆಗೆ ಹೇಳುವುದೇನು? ಅದರಿಂದ ಸ್ಥಿರವಲ್ಲದ, ಸುಖವಿಲ್ಲದ ನರಜನ್ಮ ಬಂದಾಗ ನನ್ನನ್ನು ಆರಾಧಿಸು.
“ಪುಣ್ಯದ ಫಲದಿಂದ ರಾಜರ್ಷಿಗಳಾಗಿ, ಬ್ರಹ್ಮಜ್ಞಾನಿಗಳಾಗಿ ಹುಟ್ಟಿ ಭಗವಂತನನ್ನು ಆರಾಧಿಸುವವರ ಬಗೆಗೆ ವಿಶೇಷವಾಗಿ ಹೇಳಬೇಕೆನು?” ಎಂದು ಪ್ರಶ್ನಿಸುತ್ತಾನೆ ಕೃಷ್ಣ. ಹೀಗೆ ಭಗವಂತನಲ್ಲಿ ಶರಣಾಗಿ ಆಶ್ರಯ ಬೇಡುವ ಪ್ರತಿಯೊಬ್ಬರ ರಕ್ಷಣೆಯ ಭಾರ ಭಗವಂತನದ್ದು. ಅದಕ್ಕಾಗಿ ಕೃಷ್ಣ ಇಲ್ಲಿ ನಮಗೆ ಕಿವಿ ಮಾತನ್ನು ಹೇಳುತ್ತಾನೆ: “ನೀನು ಈ ಪ್ರಪಂಚವೇ ಸರ್ವಸ್ವ ಎಂದು ಪ್ರಪಂಚದಲ್ಲಿ ಬಿದ್ದು ಒದ್ದಾಡಬೇಡ. ಏಕೆಂದರೆ ಇದು ‘ಅನಿತ್ಯಮ್ ಅಸುಖಮ್ ಲೋಕಮ್’. ಇದರಲ್ಲಿ ಸುಖವಿಲ್ಲ. ಇದು ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೋಸ್ಕರ ನನ್ನನ್ನು ಆಶ್ರಯಿಸು. ನನಗೆ ಶರಣಾಗು. ನಿನ್ನನ್ನು ಉದ್ಧಾರ ಮಾಡುವ ಹೊಣೆ ನನ್ನದು”.
