ಚನ್ನರಾಯಪಟ್ಟಣ:ಮಿನಿ ವಿಧಾನಸೌಧ ಸಭಾಂಗಣದಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿಎನ್ ಬಾಲಕೃಷ್ಣರವರು ಮಾತನಾಡಿ ಉತ್ತಮ ಸಮಾಜವನ್ನು ಕಟ್ಟಲಿಕ್ಕೆ ಶ್ರಮಿಸಿದ 39 ಮಹನೀಯ ಸಾಧಕರ ಜಯಂತಿಗಳನ್ನು ಆಡಳಿತಾತ್ಮಾಕ ವ್ಯವಸ್ಥೆಯ ಮೂಲಕ ಆಚರಣೆ ಮಾಡಿ ಅವರ ಸಂದೇಶಗಳನ್ನು ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ನಿರಂತರವಾಗಿ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಶ್ರೀ ರೇಣುಕಾಚಾರ್ಯರರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದ ಅವರು ನಮ್ಮ ಸಮಾಜದಲ್ಲಿದ್ದ ಅನೇಕ ಅನಿಷ್ಠ ಪದ್ಧತಿಗಳನ್ನು, ಅಂಕು ಡೊಂಕುಗಳನ್ನು ಖಂಡಿಸಿ ಸುಧಾರಣೆ ಮಾಡಿದ ಅನೇಕ ಮಹನೀಯ ಶರಣರ ಹಾಗೂ ಸುಧಾರಕರ ಜಯಂತಿಗಳನ್ನು ನಾವು ಪರಂಪರಾಗತವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ, ಈ ಪದ್ಧತಿಗೆ ಸ್ಪಷ್ಟ ರೂಪ ನೀಡಿ ಆಡಳಿತಾತ್ಮಕವಾಗಿ ಆಚರಣೆ ಮಾಡಿ ಸಮಾಜವನ್ನು ನಿರಂತರವಾಗಿ ಜಾಗೃತಗೊಳಿಸುವ ಆಶಯವನ್ನು ಸರ್ಕಾರ ಹೊಂದಿದೆ. ಅದರಂತೆ ಹಲವು ಸುಧಾರಕರ ಆಚರಣೆಗಳನ್ನು ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಶ್ರೀ ರೇಣುಕಾಚಾರ್ಯರ ಆಚಾರ ವಿಚಾರಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಅನುಸರಿಸೋಣ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡೋಣ ಎಂದರು.

ನುಗ್ಗೆಹಳ್ಳಿ ಪುರವರ್ಗ ಹೀರೆ ಮಠದ ಶ್ರೀ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದ ವಿಶ್ವಕ್ಕೆ ಶಾಂತಿ, ಧರ್ಮದಿಂದ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಸಂದೇಶ ನೀಡಿದರು. ರೇಣುಕಾಚಾರ್ಯ ಶ್ರೀಗಳು ನೀಡಿದ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದರು. ಸಮಾಜದ ಏಳಿಗೆಗಾಗಿ ಎಲ್ಲರೂ ರೇಣುಕಾಚಾರ್ಯರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೋರಿದರು.ಮಾನವ ಧರ್ಮಕ್ಕೆ ಜಯವಾಗಲಿ, ಆ ಮೂಲಕ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದ ಸಂದೇಶ ನೀಡಿರುವ ರೇಣುಕಾಚಾರ್ಯರು, ಜಗತ್ತಿನ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕು. ಭಾವೈಕ್ಯತೆಯಿಂದ ಬಾಳುವುದರೊಂದಿಗೆ ಮಾನವ ಜನ್ಮದ ಶ್ರೇಷ್ಠತೆ ಸಾರಬೇಕು ಎಂದು ಹೇಳಿದ್ದಾರೆ. ಮಹನೀಯರ ಸಂದೇಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೀರಶೈವ ಸಮಾಜದವರು ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಸಾಧಕರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯೋಣ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಎನ್ ಬಾಲಕೃಷ್ಣ,ತಾಲೂಕು ದಂಡಾಧಿಕಾರಿ ಜೆ ಎಸ್ ಶಂಕರಪ್ಪ, ನುಗ್ಗೆಹಳ್ಳಿ ಪುರವರ್ಗ ಹಿರೇಮಠದ ಶ್ರೀ ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶಿವ ಲಿಂಗಾಯತ ತಾಲೂಕು ಅಧ್ಯಕ್ಷರಾದ ಗಂಗೆಗೌಡ ಅಲಿಯಾಸ್ ಪಟೇಲ್ ರಾಜಣ್ಣ, ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ ಕೆ
