ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಗೊಂದಲ ನಿವಾರಿಸಿ ಸಮಾನ ನ್ಯಾಯ ನೀಡಲಿ: ದಲಿತ ಸಂಘಟನೆಗಳ ಸಮನ್ವಯ ಸಮಿತಿ
ಹಾಸನ: ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಒಳ ಮೀಸಲಾತಿ ಸಂಬಂಧ ಉಂಟಾಗಿರುವ ಗೊಂದಲ ಮತ್ತು ಅನುಮಾನಗಳನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ನಿವಾರಿಸಿ ಎಲ್ಲ ಜಾತಿಗಳಿಗೂ ಸಮಾನ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಕೃಷ್ಣದಾಸ್ ಒತ್ತಾಯಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ 2024ರ ಆಗಸ್ಟ್ನಲ್ಲಿ ನೀಡಿದ ಮಹತ್ವದ ತೀರ್ಪಿನ ಮೂಲಕ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿದೆ ಎಂದು ಹೇಳಿದರು. ಅದರಂತೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗದ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿ ವರದಿ ಪಡೆದುಕೊಂಡಿದೆ ಎಂದು ತಿಳಿಸಿದರು.
ಈ ವರದಿಯನ್ನು ಆಧರಿಸಿ ಸರ್ಕಾರ ಪರಿಶಿಷ್ಟ ಜಾತಿಯ 101 ಜಾತಿಗಳನ್ನು ಪ್ರವರ್ಗ–ಎ (ಮಾದಿಗ ಸಂಬಂಧಿತ ಜಾತಿಗಳು), ಪ್ರವರ್ಗ–ಬಿ (ಹೊಲೆಯ ಸಂಬಂಧಿತ ಜಾತಿಗಳು) ಮತ್ತು ಪ್ರವರ್ಗ–ಸಿ (ಕೊರಮ, ಲಮಾಣಿ, ಬೋವಿ ಸೇರಿದಂತೆ ಇತರೆ ಜಾತಿಗಳು) ಎಂದು ವಿಂಗಡಿಸಿ ಕ್ರಮವಾಗಿ ಶೇ.6:6:5ರಂತೆ ಪ್ರತ್ಯೇಕ ಮೀಸಲಾತಿ ನೀಡುವ ಮಸೂದೆಗೆ ಅಂಗೀಕಾರ ನೀಡಿದ್ದು, ರಾಜ್ಯಪಾಲರೂ ಸಹ ಅಂಕಿತ ಹಾಕಿದ್ದಾರೆ ಎಂದು ವಿವರಿಸಿದರು.
ಆದರೆ ಇತ್ತೀಚೆಗೆ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ ಸುಮಾರು 2.84 ಲಕ್ಷ ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು, 20 ಜೂನ್ 1995ರ ರೋಸ್ಟರ್ ನಿಯಮದ ಪ್ರಕಾರ ನೇಮಕಾತಿ ನಡೆಸುವಂತೆ ಸೂಚಿಸಿರುವುದು ಹೊಸ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಹೊಸ 100 ರೋಸ್ಟರ್ ಬಿಂದುಗಳ ನಿಯಮದ ಪ್ರಕಾರ ಪ್ರವರ್ಗ–ಎ ಗುಂಪಿನ ಜಾತಿಗಳು ಮೊದಲ ಸ್ಥಾನದಲ್ಲಿದ್ದರೆ, ಪ್ರವರ್ಗ–ಬಿ ಗುಂಪು 9ನೇ ಸ್ಥಾನದಲ್ಲಿ ಹಾಗೂ ಪ್ರವರ್ಗ–ಸಿ ಗುಂಪು 15ನೇ ಸ್ಥಾನದಲ್ಲಿ ಬರುತ್ತವೆ. ಈ ಕ್ರಮದಿಂದ ಕಡಿಮೆ ಹುದ್ದೆಗಳಿರುವ ಇಲಾಖೆಗಳ ನೇಮಕಾತಿಯಲ್ಲಿ ಪ್ರವರ್ಗ–ಬಿ ಮತ್ತು ಪ್ರವರ್ಗ–ಸಿ ಸಮುದಾಯಗಳಿಗೆ ಅವಕಾಶವೇ ಸಿಗದ ಸ್ಥಿತಿ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದಾಹರಣೆಗೆ ಒಂದು ಇಲಾಖೆಯಲ್ಲಿ 8 ಹುದ್ದೆಗಳು ಮಾತ್ರ ಖಾಲಿ ಇದ್ದರೆ, 9ನೇ ಸ್ಥಾನದಲ್ಲಿ ಇರುವ ಪ್ರವರ್ಗ–ಬಿ ಸಮುದಾಯಕ್ಕೆ ಯಾವುದೇ ಅವಕಾಶ ದೊರೆಯುವುದಿಲ್ಲ. ಇದರಿಂದ ಹೊಲೆಯ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರಗಳ ರಾಜಕೀಯ ನಡೆ ಕಾರಣವಾಗಿದ್ದು, ಪರಿಶಿಷ್ಟ ಜಾತಿಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಿತಿ ಆರೋಪಿಸಿತು.
ಇದೇ ವೇಳೆ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರ ವಿರುದ್ಧ ಕೆಲವರು ನಡೆಸುತ್ತಿರುವ ವೈಯಕ್ತಿಕ ಟೀಕೆಗಳನ್ನು ಸಮಿತಿ ಖಂಡಿಸಿತು. ಪ್ರಮುಖ ವಿಷಯಗಳಲ್ಲಿ ತೀರ್ಮಾನಗಳನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಒಟ್ಟಾಗಿ ತೆಗೆದುಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಒಬ್ಬರನ್ನೇ ಗುರಿಯಾಗಿಸುವುದು ಸರಿಯಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯ ಎಲ್ಲಾ 101 ಜಾತಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಸಹಜವಾದರೂ, ಯಾವುದೇ ಒಂದು ಜಾತಿ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿ ಅಸಭ್ಯವಾಗಿ ವರ್ತಿಸುವುದು ಸರಿಯಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿತು. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೋಸ್ಟರ್ ಬಿಂದುಗಳ ಕುರಿತು ಎಲ್ಲ ಸಮುದಾಯಗಳ ಒಮ್ಮತದ ಸೂತ್ರ ರೂಪಿಸಿ 101 ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣದಾಸ್, ಅಂಬುಗ ಮಲ್ಲೇಶ್, ಈರೇಶ್, ಪುಟ್ಟರಾಜಪ್ಪ, ಗೋವಿಂದರಾಜ್, ರಂಗರಾಜು, ಹರೀಶ್, ನಾರಾಯಣದಾಸ್, ರಾಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
