ಚನ್ನರಾಯಪಟ್ಟಣ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಮಂದಿರದ ಆವರಣಕ್ಕೆ ಇಂಟರ್ಲಾಕ್ ಅಳವಡಿಸುವ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಬುಧವಾರ ಗುದ್ದಲಿ ಪೂಜೆ ನೆರವೇರಿಸಿದರು.
ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಹಲವು ಬಾರಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪುರಸಭೆ ನಿಧಿಯಡಿ ಸುಮಾರು ₹13.5 ಲಕ್ಷ ವೆಚ್ಚದಲ್ಲಿ ಚರ್ಚ್ ಆವರಣದಲ್ಲಿ ಇಂಟರ್ಲಾಕ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆಗಾಲದ ವೇಳೆ ಚರ್ಚ್ ಆವರಣ ಕೆಸರುಮಯವಾಗುತ್ತಿದ್ದರಿಂದ ಪ್ರಾರ್ಥನೆಗೆ ಆಗಮಿಸುವ ಭಕ್ತರಿಗೆ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುಡ್ಫ್ರೈಡೆ ಹಬ್ಬದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಚರ್ಚ್ ಪಕ್ಕದಲ್ಲಿ ಹಾದು ಹೋಗುವ ಚರಂಡಿ ನಿರ್ಮಾಣದ ವೇಳೆ ಹೇಮಾವತಿ ಇಲಾಖೆಯಿಂದ ಚರ್ಚ್ಗೆ ಸಹಾಯಧನ ಒದಗಿಸಲಾಗಿದೆ. ಮುಂದಿನ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಡಿ ಚರಂಡಿಗೆ ಸ್ಲ್ಯಾಬ್ ಅಳವಡಿಸಿ ಪ್ರಾರ್ಥನೆಗೆ ಬರುವವರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚ್ ಫಾದರ್ ಜೆರೋಮ್ ಮಾಚಾಡೋ, ಪುರಸಭೆಯ ಮಾಜಿ ಸದಸ್ಯ ಸಿ.ವೈ. ಸತ್ಯನಾರಾಯಣ್, ಸಮಾಜದ ಮುಖಂಡರಾದ ಅಗಸ್ಟಿನ್, ರಾಜು ಅಂದ್ರೆಯಾಸ್, ಡೇವಿಡ್ ರಾಜು, ಶ್ರೀಮತಿ ಜೋಸ್ಪೀನ್, ಪುರಸಭಾ ಮುಖ್ಯಾಧಿಕಾರಿ ಆರ್. ಯತೀಶ್ ಕುಮಾರ್, ಗುತ್ತಿಗೆದಾರ ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
