ಟಿ.ನರಸೀಪುರ : ಕಾರ್ಮಿಕರು ನಮ್ಮ ಮತದಾರರು ಅವರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಕ್ರೀಡಾಂಗಣದ ವಿಚಾರವಾಗಿ ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಮೇಲಾಧಿಕಾರಿಗಳ ನಿಯೋಗ ರಚನೆ ಮಾಡಿ ಅವರು ಬಂದು ಸ್ಥಳ ಪರಿಶೀಲಿಸಿದ ನಂತರ ಕ್ರೀಡಾಂಗಣ ನಿರ್ಮಾಣ ಮಾಡಬೇಕೇ ಬೇಡವೇ ಎಂದು ತೀರ್ಮಾನಿಸಲಾಗುವುದೆಂದು ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಸಿಲ್ಕ್ ಫ್ಯಾಕ್ಟರಿ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸುವುದನ್ನು ವಿರೋಧಿಸಿ ರೇಷ್ಮೆ ಕಾರ್ಖಾನೆ ಉಳಿಸಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡರು ಕನ್ನಡಪರ ಸಂಘಟನೆಗಳು ಸೇರಿದಂತೆ ಇತರೆ ಸಂಘಟನೆಗಳು ನಡೆಸುತ್ತಿರುವ ಹೋರಾಟ 15ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಕಾರ್ಮಿಕರು ಹಾಗೂ ಸಿಲ್ಕ್ ಫ್ಯಾಕ್ಟರಿಯನ್ನು ಉಳಿಸಿಕೊಳ್ಳಲು ತಾಲೂಕು ಸೇರಿದಂತೆ ಮಂಡ್ಯ, ಮೈಸೂರು ಜಿಲ್ಲೆಗಳಿಂದ ಹಲವು ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿವೆ ಇಂದು ಸಹ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯರವರು ಸಿಲ್ಕ್ ಫ್ಯಾಕ್ಟರಿ ಆವರಣಕ್ಕೆ ಪ್ರವೇಶಿಸಿ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ನಂತರ ಪ್ರತಿಭಟನಾ ನಿರತರ ಸ್ಥಳಕ್ಕೆ ಬಂದಾಗ ಒಂದು ಗುಂಪು ದಿಕ್ಕಾರ ಘೋಷಣೆಗಳನ್ನು ಕೂಗುತ್ತಿದ್ದರೆ ಮತ್ತೊಂದು ಗುಂಪು ಪರಿಸ್ಥಿತಿಯ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು. ಆದರೆ ದಿಕ್ಕಾರ ಘೋಷಣೆಗಳು ಜೋರಾದಾಗ ಯತೀಂದ್ರ ಸಿದ್ದರಾಮಯ್ಯರವರ ಮಾತುಗಳು ಯಾರಿಗೂ ಕೇಳದಂತಾದವು, ಯತೀಂದ್ರ ಸಿದ್ದರಾಮಯ್ಯ ಅವರು ಮಾತ್ರ ಪ್ರತಿಭಟನಾ ನಿರತರು ಏನೇ ದಿಕ್ಕಾರ ಘೋಷಣೆಗಳನ್ನು ಕೂಗಿದರು ತಮ್ಮ ಮಾತನ್ನು ಮುಂದುವರಿಸಿ ಸಿಲ್ಕ್ ಫ್ಯಾಕ್ಟರಿ ಹಾಗೂ ಕಾರ್ಮಿಕರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಅವರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ತೀರ್ಮಾನಕ್ಕೆ ಬರಲಾಗುವುದೆಂದರು.

ಸಿಲ್ಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತೊಂದರೆ ಕೊಟ್ಟು ಕ್ರೀಡಾಂಗಣ ಮಾಡುವ ಉದ್ದೇಶ ನಮಗಿಲ್ಲ ಆದರೆ ಕ್ರೀಡಾಂಗಣ ನಿರ್ಮಾಣಕ್ಕೆ ಬೇರೆಲ್ಲೂ ಜಾಗ ಇರದ ಕಾರಣ ರೇಷ್ಮೆ ಗೂಡಿನ ಮಾರುಕಟ್ಟೆ ಇದ್ದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿದ್ದು ಅದಕ್ಕೆ ಇಲ್ಲಿಂದ ಸ್ವಲ್ಪ ಜಾಗವನ್ನು ಪಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿಂದೆ ತೋಟಗಾರಿಕೆ ಇಲಾಖೆ ಇದ್ದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದೆವು ಜೊತೆಗೆ ಸಹಕಾರ ಸಂಘ ಇರುವ ಸ್ಥಳವನ್ನು ನೋಡಿದ್ದೆವು ತೋಟಗಾರಿಕೆ ಇದ್ದ ಸ್ಥಳದಲ್ಲಿ ಜಾಗ ಕಡಿಮೆ ಇದ್ದು ಕ್ರೀಡಾಂಗಣ ನಿರ್ಮಾಣಕ್ಕೆ ಸಾಕಾಗುವುದಿಲ್ಲವೆಂದು ತೀರ್ಮಾನಿಸಿ ಸಹಕಾರ ಸಂಘದ ಜಾಗ ತೆಗೆದುಕೊಳ್ಳಲು ಬಾರದ ಕಾರಣ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ರೇಷ್ಮೆ ಮಾರುಕಟ್ಟೆ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಬಹುದೆಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರಿಂದ ಈ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಲು ಮುಂದಾಗಿದ್ದೇವೆಂದರು.
ಈ ವಿಷಯ ಸಂಬಂಧ ಪ್ರತಿಭಟನಾ ನಿರತರು ಕ್ರೀಡಾಂಗಣ ನಿರ್ಮಾಣಕ್ಕೆ ಸಿಲ್ಕ್ ಫ್ಯಾಕ್ಟರಿ ಸೂಕ್ತವಾದ ಸ್ಥಳವೆಲ್ಲವೆಂದು ತಿಳಿಸಿದ್ದು ಹಲವು ತಾಂತ್ರಿಕ ಕಾರಣಗಳನ್ನು ನೀಡಿದ್ದಾರೆ ಅವುಗಳೆಲ್ಲವನ್ನು ಮತ್ತೊಮ್ಮೆ ಮೇಲಾಧಿಕಾರಿಗಳು ಪರಿಶೀಲಿಸಿ, ಹೌದು ಈ ಸ್ಥಳ ಸೂಕ್ತವಲ್ಲ ಎಂದರೆ ಕ್ರೀಡಾಂಗಣ ನಿರ್ಮಾಣ ಇಲ್ಲಿ ಮಾಡುವುದಿಲ್ಲ ಆದರೆ ಜಾಗದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿದರೆ ಇದೇ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು. ಏನೇ ಆದರೂ ವೈಜ್ಞಾನಿಕ ಆದಾರದಲ್ಲಿ ಮಾಡಲಾಗುವುದೆಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟು ಮಾತನ್ನು ಮುಗಿಸಿ ಹೊರಟೇ… ಬಿಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಡಾ.ಹೆಚ್.ಸಿ.ಮಹದೇವಪ್ಪರವರು ಟಿ.ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ಮತದಾರರಿಂದ ಆಯ್ಕೆಯಾದವರು.ಇಲ್ಲಿನ ಮತದಾರರಿಗೆ ತೊಂದರೆ ಆದರೆ ಅದರ ನಷ್ಟ ನಮಗೆ.ಅವರಿಗೆ ತೊಂದರೆ ಕೊಟ್ಟು ಕ್ರೀಡಾಂಗಣ ನಿರ್ಮಿಸುವ ಇರಾದೆ ಇರಲಿಲ್ಲ.
ಡಾ.ಯತೀಂದ್ರ ಸಿದ್ದರಾಮಯ್ಯ
ವಿಧಾನಪರಿಷತ್ ಸದಸ್ಯರು
ಈ ಸಂದರ್ಭದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ಮಾಡಿದ ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು, ರೈತ ಮುಖಂಡರುಗಳಾದ ಕಿರಗಸೂರು ಶಂಕರ್,ಪರಶಿವಮೂರ್ತಿ,ಕುಮಾರಸ್ವಾಮಿ ಸೇರಿದಂತೆ,ದಸಂಸ ಉಮಾಮಹದೇವ್,ಡಾ.ಬಿ.ಮರಯ್ಯ,ದಿವಾಕರ್ ಮರಯ್ಯ,ಪುರಸಭೆ ಮಾಜಿ ಅಧ್ಯಕ್ಷರುಗಳಾದ ಎಳವರಹುಂಡಿ ಸೋಮು,ಮದನ್ ರಾಜ್,ಅಯೂಬ್ ಖಾನ್,ಗರ್ಗೇಶ್ವರಿ ಗೋಪಾಲ್,ಮನ್ನೆಹುಂಡಿ ಮಹೇಶ್,ಮುದ್ದೇಗೌಡ,ಕೆಂಪಯ್ಯನಹುಂಡಿ ಮಹದೇವಣ್ಣ ಸೇರಿದಂತೆ ಹಲವಾರು ಮುಖಂಡರಿದ್ದರು.
