ತುಮಕೂರು:ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಡು ಕೇಳರಿಯದಷ್ಟು ನೂತನ ಸಂಶೋಧನೆ ಮಾಡಲಾಗಿದೆ. ಅದರ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲಾಗಿದೆ. ಆದರೆ ಇಂದು ಅದನ್ನು ಬಳಸುವ ಶಕ್ತಿಗಳು ತಮ್ಮ ಸ್ವಾರ್ಥ ಲಾಲಸೆಯ ಮನೋಭಾವದಿಂದ ದುರ್ಬಳಕೆ ಮಾಡಿಕೊಳ್ಳುತ್ತಾ ಇಡೀ ಜಗತ್ತನ್ನು ಆತಂಕಕ್ಕೀಡು ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟವಾದ ನೀತಿ ನಿರೂಪಣೆಯನ್ನು ಮಾಡಬೇಕಾಗಿದ್ದ ವಿಶ್ವಸಂಸ್ಥೆ ಇಂದು ಹಲ್ಲಿಲ್ಲದ ಹಾವಿನಂತಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್ ಯೋಗೀಶ್ವರಪ್ಪ ನುಡಿದರು.
ಅವರು ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತç ವಿಜ್ಞಾನಿಗಳಾದ ಡಾ. ನಾಗಭೂಷಣ್ ರವರು ಮಾತನಾಡಿ ರಾಮನ್ ಪರಿಣಾಮದ ಕುರಿತು ವಿವರಗಳು ಪ್ರಕಟವಾದ ಕೇವಲ ಹನ್ನೆರಡು ವರ್ಷಗಳ ಅವಧಿಯಲ್ಲಿಯೇ ಆ ವಿದ್ಯಮಾನವನ್ನು ಕುರಿತು ಬೇರೆ ಬೇರೆ ದೇಶದ ವಿಜ್ಞಾನಿಗಳು ಬರೆದ 1800 ಪ್ರೌಢ ಪ್ರಬಂಧಗಳು ಪ್ರಕಟವಾದವು ಇದರ ಜೊತೆಗೆ ರಾಮನ್ ಅವರ ಅಧ್ಯಯನಗಳ ಫಲವಾಗಿ ಅದೇ ಕಾಲದಲ್ಲಿ ಸಾವಿರಾರು ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಅಭ್ಯಾಸ ಮಾಡುವುದು ಸಾಧ್ಯವಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ ಮಾತನಾಡಿ ಭಾರತ ದೇಶ ವಿಜ್ಞಾನ ತಂತ್ರಜ್ಞಾನದಲ್ಲಿ ಅಗಾಧ ಸಾಧನೆ ಮಾಡಿದ್ದು ಭಾರತೀಯರು ಚಂದ್ರಲೋಕಕ್ಕೂ ಹೋಗಿ ಸಂಶೋಧನೆ ನಡೆಸುತ್ತಿದ್ದಾರೆ. ಜೀವನದ ಅವಿಭಾಜ್ಯ ಅಂಗವಾದ ವಿಜ್ಞಾನವನ್ನು ವಿದ್ಯಾರ್ಥಿಗಳು ಓದಿ ಮೂಲ ವಿಜ್ಞಾನದ ವಿಷಯಗಳ ಬಗ್ಗೆ ಸಂಶೋಧನೆ ಮಾಡಿ ವಿಜ್ಞಾನಿಗಳಾಗಬೇಕೆಂದು ಕರೆ ನೀಡಿದರು. ವಿಜ್ಞಾನದಲ್ಲಿನ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದವರಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಪ್ರಾಧ್ಯಾಪಕಿ ಸರ್ವಮಂಗಳಾ, ಡಾ. ರೇವಣ್ಣಸಿದ್ದಪ್ಪ, ಡಾ. ಶೈಲೇಶ್ ಹಾಜರಿದ್ದರು. ಪ್ರೇರಣ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ದಿವ್ಯ ಸ್ವಾಗತಿಸಿದರು, ಪಲ್ಲವಿ ವಂದಿಸಿದರು.
– ಕೆ.ಬಿ.ಚಂದ್ರಚೂಡ
