ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ (Guidance Value) ಪರಿಷ್ಕರಣೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಮೂರು ವರ್ಷದ ಬಳಿಕ ಮತ್ತೆ ದರ ಹೆಚ್ಚಳವಾಗುವ ಸಾಧ್ಯತೆ ಕಂಡುಬಂದಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಶೇ.15ರಿಂದ ಶೇ.20ರಷ್ಟು ಮಾರ್ಗಸೂಚಿ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಹಿಂದೆ 2023ರ ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ.30ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸುಮಾರು ಎರಡೂವರೆ ವರ್ಷಗಳ ನಂತರ ಮತ್ತೆ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ನಿವೇಶನ ಹಾಗೂ ಜಮೀನುಗಳ ಮಾರುಕಟ್ಟೆ ಮೌಲ್ಯವು ಏರಿಕೆಯಾಗುತ್ತಿರುವ ಹಿನ್ನೆಲೆ, ಅದಕ್ಕೆ ಅನುಗುಣವಾಗಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಗಸೂಚಿ ದರವೇ ಸಾಮಾನ್ಯವಾಗಿ ಮಾರುಕಟ್ಟೆ ದರದ ಆಧಾರವಾಗಿರುವುದರಿಂದ ಈ ಪರಿಷ್ಕರಣೆ ಬಳಿಕ ಸ್ಥಿರಾಸ್ತಿಗಳ ನೋಂದಣಿ ಮೌಲ್ಯದಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.
ಮಾರ್ಗಸೂಚಿ ದರ ಹೆಚ್ಚಳದಿಂದ ಸರ್ಕಾರದ ಆದಾಯದಲ್ಲೂ ಏರಿಕೆ ನಿರೀಕ್ಷಿಸಲಾಗಿದೆ. ಈ ಪರಿಷ್ಕರಣೆಯಿಂದ ರಾಜ್ಯ ಖಜಾನೆಗೆ ವರ್ಷಕ್ಕೆ ಸುಮಾರು ₹2,500 ಕೋಟಿ ಹೆಚ್ಚುವರಿ ಆದಾಯ ಬರಬಹುದು ಎಂದು ಅಂದಾಜಿಸಲಾಗಿದೆ.
ಇದೀಗ ಜಾರಿಗೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಹಣಕಾಸು ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸವಾಲಾಗಿರುವುದರಿಂದ, ಸಂಪನ್ಮೂಲ ಕ್ರೋಡೀಕರಣದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ 2025–26ನೇ ಆರ್ಥಿಕ ವರ್ಷದಲ್ಲಿ ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ ಸರ್ಕಾರ ₹28,000 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ ಪ್ರಸ್ತುತ ಅಂದಾಜು ಪ್ರಕಾರ ₹25,000 ಕೋಟಿ ಮಾತ್ರ ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ ಸುಮಾರು ₹3,000 ಕೋಟಿ ಕೊರತೆ ಉಂಟಾಗುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಒಟ್ಟು 259 ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 43 ಕಚೇರಿಗಳು ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇವೆ. ಪ್ರತಿ ವರ್ಷ ರಾಜ್ಯದಲ್ಲಿ ಸುಮಾರು 22 ರಿಂದ 24 ಲಕ್ಷ ಸ್ಥಿರಾಸ್ತಿ ನೋಂದಣಿ ಹಾಗೂ ಇತರೆ ದಸ್ತಾವೇಜು ಪ್ರಕ್ರಿಯೆಗಳು ನಡೆಯುತ್ತಿದ್ದು, ಅದರಲ್ಲಿ ಶೇ.60ರಷ್ಟು ದಾಖಲೆಗಳು ಬೆಂಗಳೂರಿನ ಕಚೇರಿಗಳಲ್ಲೇ ನಡೆಯುತ್ತಿವೆ.
ಈ ಹಿನ್ನೆಲೆ ಮಾರ್ಗಸೂಚಿ ದರ ಪರಿಷ್ಕರಣೆ ಜಾರಿಗೆ ಬಂದರೆ ಸ್ಥಿರಾಸ್ತಿಗಳ ನೋಂದಣಿ ಮೌಲ್ಯದಲ್ಲಿ ಬದಲಾವಣೆ ಉಂಟಾಗಲಿದ್ದು, ಸರ್ಕಾರದ ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
