ಕೊರಟಗೆರೆ;- ವಿದ್ಯಾರ್ಥಿಗಳ ಜ್ಞಾನಾರ್ಜನೆ, ಬುದ್ದಿವಂತಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಶಾರದ ಪೂಜೆ ಅತ್ಯಂತ ಮಂಗಳಕರವೆಂದು ನಮ್ಮ ಪೂರ್ವಜರು ನಂಬಿದ್ದಾರೆ ಎಂದು ಮುಖ್ಯ ಶಿಕ್ಷಕಿ ಮಂಜುಳ ತಿಳಿಸಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಕಾರ್ಡಿಯಲ್ ಸ್ಕೂಲ್ನಲ್ಲಿ ಶನಿವಾರ ಶಾರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಶಾರದ ಪೂಜೆಯನ್ನ ಬಹುತೇಕ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಜ್ಞಾನ, ಕಲೆ ಮತ್ತು ಶಿಕ್ಷಣದ ದೇವತೆಯಾದ ಶಾರದೆಯನ್ನ ಶಾಲೆಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಮಕ್ಕಳಿಗೆ ಶಾರದೆಯ ಬಗ್ಗೆ ತಿಳಿಸುವ ಸಲುವಾಗ ವಿದ್ಯಾರ್ಥಿಗಳು ಉತ್ತಮ ಉಡುಗೆಗಳನ್ನ ತೊಟ್ಟು, ಶಾಲೆಯನ್ನ ಸಿಂಗಾರಗೊಳಿಸಿ ವಿವಿಧ ಸಾಂಸ್ಕೃತಿಕ ಹಾಡುಗಳಿಗೆ ನೃತ್ಯ ಮಾಡಿ ಎಲ್ಲರೂ ಸೇರಿ ಶಾರದೆ ತಾಯಿಗೆ ವಿಶೇಷ ಪೂಜೆಯನ್ನ ಸಲ್ಲಿಸುವುದು ನಮ್ಮ ಗ್ರಾಮೀಣ ಭಾಗದ ವಾಡಿಕೆಯಾಗಿದೆ ಎಂದು ತಿಳಿಸಿದರು.
ಶಾಲೆಯ ಅಧ್ಯಕ್ಷ ಇಸ್ಮಾಯಿಲ್ ಜಬೀವೂಲ್ಲಾ ಮಾತನಾಡಿ ಪ್ರತಿವರ್ಷ ನಮ್ಮ ಕಾರ್ಡಿಯಲ್ ಸ್ಕೂಲ್ನ ಶಾಲೆಯಲ್ಲಿ ಶಾರದ ಪೂಜೆಯನ್ನ ಆಚರಣೆ ಮಾಡಿಕೊಂಡು ಬರುತ್ತಿದ್ದು, ಮಕ್ಕಳು ಸಂತಸದಿಂದ ತಾಯಿ ಶಾರದೆಯನ್ನ ಪೂಜೆ ಮಾಡಿ ನೃತ್ಯ ಮಾಡಿಕೊಂಡು ಸಿಹಿ ತಿನ್ನುವ ಮೂಲಕ ಶಾರದ ಪೂಜೆಯನ್ನ ಅತ್ಯಂತ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಿದರು.
– ಶ್ರೀನಿವಾಸ್ ಕೊರಟಗೆರೆ.
