ಕೊರಟಗೆರೆ:- ಚಿಕ್ಕನಹಳ್ಳಿ ಒಂದು ಕುಗ್ರಾಮ, ಮಹಾಶಕ್ತಿ ಮತ್ತು ಆದಿಶಕ್ತಿ ದೇವತೆಗಳ ನೆಲೆಯಿಂದ ಗ್ರಾಮಕ್ಕೆ ವಿಶೇಷ ಕಳೆ ಬಂದಿದೆ. ತಾಯಿ ಮಹಿಮೆಗೆ ಇಡೀ ರಾಜ್ಯವೇ ಬೆರಗಾಗಿದ್ದು, ದೇವಿಯ ದರ್ಶನ ಪಡೆಯಲು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು ಆಗಮಿಸುತ್ತಿದ್ದಾರೆ ಎಂದು ಚಲನಚಿತ್ರ ನಿರ್ದೇಶಕ ಶಶಾಂಕ್ರಾಜ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಮಹಾಶಕ್ತಿ ಮಾರಮ್ಮ, ಆದಿಶಕ್ತಿ ಚೌಡೇಶ್ವರಿ ದೇವಿ, ಕಾಟೇರಮ್ಮ, ಆಘೋರ ರಣಭದ್ರಕಾಳಿ ದೇವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಚಾರವಿಲ್ಲದೆ, ಸಾಕಷ್ಟು ತೊಂದರೆಗಳ ನಡುವೆ ಆದಿ ದೇವತೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ತಾಯಿ ಪವಾಡ ರಾಜ್ಯದ ಮೂಲೆ ಮೂಲೆಯ ಜನರ ಗಮನ ಸೆಳೆದಿದ್ದು, ದಿನನಿತ್ಯ ಮಹಾಪೂಜೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮಾಧ್ಯಮಗಳ ಪ್ರಚಾರ, ಭಕ್ತರ ಸಹಕಾರ ದೇವಾಲಯದ ಅಭಿವೃದ್ಧಿಗೆ ಅತ್ಯವಶ್ಯಕವಾಗಿ ಬೇಕಿದೆ ಎಂದು ಹೇಳಿದರು.

ಬೆಂಗಳೂರು ಭಕ್ತಾದಿ ಆನಂದ್ ಮಾತನಾಡಿ, ಬಾಲ್ಯದಲ್ಲಿ ಈ ಗ್ರಾಮ ನಮಗೆ ಸಾಕಷ್ಟು ಸಿಹಿ ಕನಸುಗಳನ್ನು ಹುಟ್ಟುಹಾಕಿತ್ತು, ಇಂದು ಆ ಕನಸನ್ನು ನನಸು ಮಾಡಿಕೊಂಡು ಬೆಂಗಳೂರಿನಲ್ಲಿ ನಮ್ಮ ಕುಟುಂಬ ವಾಸಿಸುತ್ತಿದೆ. ತಾಯಿ ದೇವಸ್ಥಾನಕ್ಕೆ ಎರಡನೇ ಬಾರಿ ಆಗಮಿಸುತ್ತಿರುವುದು, ತಾಯಿ ಪವಾಡ ಅಪಾರವಾಗಿದೆ, ಕೊಟ್ಟ ಮಾತಿನಂತೆ ಆದಿಶಕ್ತಿ ದೇವತೆಗಳು ಭಕ್ತರ ಕೋರಿಕೆಯನ್ನು ನೆರವೇರಿಸುತ್ತಾ ಬರುತ್ತಿದ್ದಾಳೆ ಎಂದು ಹೇಳಿದರು.
ಮತ್ತೋರ್ವ ಭಕ್ತಾದಿ ಗಂಗಾ ಮಾತನಾಡಿ, ದೇವರ ಮೇಲೆ ನನಗೆ ಮೊದಲಿನಿಂದಲೂ ಭಕ್ತಿಯೆಂಬುದು ಕಡಿಮೆ, ದೇವಾಲಯಕ್ಕೆ ಬರುವ ಮನಸ್ಸಿಲ್ಲದಿದ್ದರೂ ತಾಯಿ ಕೃಪೆ ಇಲ್ಲಿಯವರೆಗೂ ಬರುವಂತೆ ಆಗಿದೆ, ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಿ ನೊಂದವರ ಪರವಾಗಿ ಕೆಲಸ ಮಾಡುವ ನಿರೀಕ್ಷೆಯಿಟ್ಟುಕೊಂಡಿದ್ದು ತಾಯಿ ಹೂ ಪ್ರಸಾದ ನೀಡಿದೆ, ಮಹಾಶಕ್ತಿ, ಆದಿಶಕ್ತಿ ದೇವತೆಗಳು ಕೋರಿಕೆಯನ್ನು ಆದಷ್ಟು ಬೇಗ ನಡೆಸಿಕೊಡಲಿ ಎಂದು ಪ್ರಾರ್ಥಿಸಿಕೊಂಡರು.
ಪ್ರಧಾನ ಅರ್ಚಕ ರಾಜು ಸ್ವಾಮಿ ಮಾತನಾಡಿ, ಚಿಕ್ಕನಹಳ್ಳಿ ಗ್ರಾಮದ ಆದಿದೇವತೆಗಳು ನೊಂದು ಬೆಂದು ಬಂದ ಭಕ್ತರ ಪಾಲಿನ ಭಾಗ್ಯದೇವತೆ, ಆದಿಶಕ್ತಿ ಚೌಡೇಶ್ವರಿ, ಕಾಟೇರಿಯಮ್ಮ, ಅಘೋರ ರಣಭದ್ರಕಾಳಿ, ಮಹಾಶಕ್ತಿ ಮಾತೆಯರು ನೆಲೆಸಿರುವ ಪುಣ್ಯಭೂಮಿ ಇದು ಎಂದರು.

ಭಕ್ತರು ಹರಕೆ ಕಟ್ಟಿ ಹೋಗಿ ಒಂದು ವಾರದೊಳಗೆ ಅವರ ಕಷ್ಟಗಳು ಮಂಜುಗಡ್ಡೆಯಂತೆ ಕರಗಿ ಹೋಗಿ ಸುಖ ಸಮೃದ್ಧಿ ಸಂತೋಷದ ಜೀವನವನ್ನು ಕಂಡಿದ್ದಾರೆ, ಮಹಾಶಕ್ತಿಯರ ಸನ್ನಿದಾನಕ್ಕೆ ಬರುವ ಭಕ್ತಾದಿಗಳಿಗೂ ನಾಡಿನ ಸಮಸ್ತ ಜನತೆಗೂ ಸನ್ಮಂಗಳವನ್ನು ನೀಡಿ ಆಶೀರ್ವಾದಿಸಲಿ ಎಂದು ಹೇಳಿದರು.
ಚಿಕ್ಕನಹಳ್ಳಿ ಗ್ರಾಮದಲ್ಲಿ ಆದಿಶಕ್ತಿ ದೇವಾಲಯದಲ್ಲಿ 4 ದೇವತೆಗಳ ದರ್ಶನ ಭಾಗ್ಯ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ. ಈ ಗ್ರಾಮದಲ್ಲಿ ನಡೆಯುವ ವಿಶೇಷ ಪೂಜೆಗಳು, ತಾಯಿ ಪವಾಡ ವಿಸ್ಮಯಕಾರಿ. ನಿರ್ದೇಶಕ ಶಶಾಂಕ್ರಾಜ್ ಈ ದೇವಾಲಯದ ಮಹಿಮೆ ತಿಳಿಸಿದ ವೇಳೆಯಿಂದಲೂ ದೇವತೆಗಳ ದರ್ಶನ ಪಡೆಯಬೇಕೆಂಬ ಹಂಬಲ ಹೆಚ್ಚಾಗುತ್ತಿತ್ತು, ತಾಯಿ ಕೃಪೆ ಭಕ್ತರ ಮೇಲೆ ಸದಾ ಇರಲಿ.
ಟಿ. ನಾಗರಾಜು
ಗಜಾನನ ಪ್ರೂಟ್ಸ್ ಜ್ಯೂಸ್ ಸೆಂಟರ್, ಬೆಂಗಳೂರು.

ಈ ವೇಳೆ ಭಕ್ತಾದಿಗಳಾದ ನಾಗರಾಜು.ಟಿ, ರಂಜಿತಾ ಸಿ.ಕೆ, ನಿರ್ಮಲ, ರವಿಕುಮಾರ್, ಸೌಮ್ಯ, ರಾಜಪ್ಪ, ರಾಧಮ್ಮ, ಮಂಜುನಾಥ್, ಭಾಗ್ಯಮ್ಮ, ಸುಶೀಲ, ಆನಂದ, ಅರ್ಜುನ್, ಕಿಶೋರ್, ಶ್ವೇತಾ, ಶಿಲ್ಪಾ ಸೇರಿದಂತೆ ಇತರರು ಹಾಜರಿದ್ದರು.
- ಶ್ರೀನಿವಾಸ್ ಕೊರಟಗೆರೆ.
