ಕೆ.ಆರ್.ಪೇಟೆ,ಮಾ.07: ತಾಲ್ಲೂಕಿನ ಅಂಬಿಗರಹಳ್ಳಿ ಗ್ರಾಮದ ರೈತ ಶಿವರಾಮು ಮತ್ತು ಅರುಣಕುಮಾರಿ ದಂಪತಿಗಳ ಸುಪುತ್ರ ಡಾ.ಎ.ಎಸ್.ಮುತ್ತೇಶ್ಗೌಡ ಐ.ಎ.ಎಸ್. ಪರೀಕ್ಷೆಯಲ್ಲಿ 622ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿ, ತಾಲ್ಲೂಕಿನ ಪ್ರಪ್ರಥಮ ಐ.ಎ.ಎಸ್.ಅಧಿಕಾರಿ ಎಂಬ ಬಿರುದಿಗೆ ಭಾಜನವಾಗಿದ್ದಾರೆ.
ಅಂಬಿಗರಹಳ್ಳಿ ಗ್ರಾಮದಲ್ಲಿ ದಿನಾಂಕ:13-01-1998ರಂದು ಅಂಬಿಗರಹಳ್ಳಿ ಶಿವರಾಮು ಮತ್ತು ಅರುಣಕುಮಾರಿ ದಂಪತಿಗಳ ಪುತ್ರನಾಗಿ ಜನಿಸಿದ ಡಾ.ಎ.ಎಸ್.ಮುತ್ತೇಶ್ಗೌಡ ಅವರು ಪ್ರಾಥಮಿಕ ಶಿಕ್ಷಣವನ್ನು ಕೆ.ಆರ್.ಪೇಟೆ ಪಟ್ಟಣದ ಆಶೀರ್ವಾದ್ ಪ್ರಾಥಮಿಕ ಶಾಲೆಯಲ್ಲಿ ಪಡೆದುಕೊಂಡರು. ಪ್ರೌಢ ಶಿಕ್ಷಣವನ್ನು ತೇಗನಹಳ್ಳಿ ಆಶೀರ್ವಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.97.50ರಷ್ಟು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣ ಹೊಂದಿದ್ದಾರೆ. ಪಿಯುಸಿಯಲ್ಲಿ ಪಿಸಿಎಂಬಿ ವಿಜ್ಞಾನ ಶಿಕ್ಷಣವನ್ನು ಮೂಡಿಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಶೇ.98ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣ ಹೊಂದಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದುಕೊಂಡಿದ್ದಾರೆ. ನಂತರ ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಒಂದು ವರ್ಷಗಳ ಕಾಲ ವೈದ್ಯರಾಗಿ ಗ್ರಾಮೀಣ ಸೇವೆಯನ್ನು ಸಲ್ಲಿಸಿರುತ್ತಾರೆ. ಅನಂತರ ಐ.ಎ.ಎಸ್. ಪರೀಕ್ಷೆ ಬರೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ಜೊತೆ ಜೊತೆಗೆ ಐ.ಎ.ಎಸ್. ಪರೀಕ್ಷಾ ತರಬೇತಿಯನ್ನು ಬೆಂಗಳೂರಿನ ಖಾಸಗಿ ಕೋಚಿಂಗ್ ಸೆಂಟರ್ ನಲ್ಲಿ ಪಡೆದುಕೊಂಡು 2026ನೇ ಸಾಲಿನ ಯು.ಪಿ.ಎಸ್.ಸಿ- ಐ.ಎ.ಎಸ್. ವಿಭಾಗದಲ್ಲಿ ಪರೀಕ್ಷೆಯನ್ನು ಬರೆದು ಅಖಿಲ ಭಾರತ ಮಟ್ಟದಲ್ಲಿ 622ನೇ ರ್ಯಾಂಕ್ ಪಡೆದುಕೊಂಡು ಉತ್ತೀರ್ಣ ಹೊಂದಿದ್ದರೆ ಈ ಮೂಲಕ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ತಾಲ್ಲೂಕಿನ ಪ್ರಥಮ ಐ.ಎ.ಎಸ್. ಅಧಿಕಾರಿ ಎಂಬ ಕೀರ್ತಿಗೂ ಡಾ.ಎ.ಎಸ್.ಮುತ್ತೇಶ್ಗೌಡ ಅವರು ಭಾಜನರಾಗಿದ್ದಾರೆ.
ಐಎಎಸ್ ಪರೀಕ್ಷೆಯಲ್ಲಿ 622 ನೇ ರ್ಯಾಂಕ್ ಪಡೆದು ತಾಲ್ಲೂಕಿನ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿರುವ ಅಂಬಿಗರಹಳ್ಳಿ ಡಾ.ಎ.ಎಸ್.ಮುತ್ತೇಶ್ಗೌಡ ಅವರನ್ನು ಶಾಸಕ ಹೆಚ್.ಟಿ.ಮಂಜು, ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ಅಭಿವೃದ್ಧಿ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಆರ್.ಟಿ.ಓ ಮಲ್ಲಿಕಾರ್ಜುನ್, ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ್ರಾಮೇಗೌಡ, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಂಬರೀಶ್, ರಾಷ್ಟç ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂಚಿ.ಸಣ್ಣಸ್ವಾಮೀಗೌಡ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮೀಗೌಡ, ಬಿ.ಎನ್.ಶಿವರಾಮೇಗೌಡ ಸೇರಿದಂತೆ ತಾಲ್ಲೂಕಿನ ವಿವಿಧ ಗಣ್ಯರು ಅಭಿನಂದಿಸಿದ್ದಾರೆ.
– ಶ್ರೀನಿವಾಸ್ ಆರ್.
