ಕೆ.ಆರ್.ಪೇಟೆ,ಮಾ.07: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊರಟೀಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 11 ಮಂದಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 11ಸ್ಥಾನಗಳಲ್ಲಿಯೂ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶಾಸಕರಾದ ಹೆಚ್.ಟಿ.ಮಂಜು ಅವರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು 11ಕ್ಕೆ 11ಸ್ಥಾನಗಳಲ್ಲಿಯೂ ಅತ್ಯಧಿಕ ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.
ನೂತನ ನಿರ್ದೇಶಕರಾಗಿ ಗೆಲುವು ಸಾಧಿಸಿದ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಿಂದ ಜಯರಾಮು, ನಾರಾಯಣಗೌಡ, ಕೆ.ಎಸ್.ಮಹೇಶ್, ಕೆ.ಎಸ್.ಕೃಷ್ಣೇಗೌಡ, ಹರೀಶ್, ಕೆ.ಎಸ್.ವಾಸುದೇವೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಲಕ್ಷ್ಮಿದೇವಮ್ಮತಮ್ಮಣ್ಣಗೌಡ, ಎಸ್.ಎಂ.ಶೃತಿಪ್ರಕಾಶ್, ಬಿಸಿಎಂ.ಎ ಮೀಸಲು ಕ್ಷೇತ್ರದಿಂದ ನಾರಾಯಣಶೆಟ್ಟಿ, ಬಿಸಿಎಂ.ಬಿ. ಮೀಸಲು ಕ್ಷೇತ್ರದಿಂದ ಕೆ.ಕೆ.ಲೋಕೇಶ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಯಶೋಧಮ್ಮ ಅವರು ಅಭೂತಪೂರ್ವ ಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಹೆಚ್.ಬಿ.ಭರತ್ಕುಮಾರ್ ತಿಳಿಸಿದ್ದಾರೆ.
ನೂತನ ನಿರ್ದೇಶಕರಾಗಿ ಆಯ್ಕೆಯಾದ ಜೆಡಿಎಸ್ ಪಕ್ಷದ ಎಲ್ಲಾ 11ಮಂದಿ ಅಭ್ಯರ್ಥಿಗಳನ್ನು ಶಾಸಕ ಹೆಚ್.ಟಿ.ಮಂಜು ಅಭಿನಂದಿಸಿ ಮಾತನಾಡಿ ನಮ್ಮ ಜೆಡಿಎಸ್ ಪಕ್ಷವು ತಾಲ್ಲೂಕಿನ ಸಹಕಾರ ಕ್ಷೇತ್ರದಲ್ಲಿಯೂ ಗಟ್ಟಿ ನೆಲೆಯನ್ನು ಹೊಂದಿದೆ. ಇತ್ತೀಚೆಗೆ ನಡೆದ ಬಹುತೇಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಜೆಡಿಎಸ್ ಪಕ್ಷವು ಮೇಲುಗೈ ಸಾಧಿಸಿದೆ. ಇದು ಫಲಿತಾಂಶದ ಮೂಲಕ ತಿಳಿದು ಬರುತ್ತಿದೆ. ಸಹಕಾರ ಸಂಘಗಳು ಪಕ್ಷಾತೀತವಾಗಿ ಕೆಲಸ ಮಾಡಲಿ ಎಂದು ನಾನು ಶಾಸಕನಾಗಿ ಆಶಿಸುತ್ತೇನೆ. ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸಬಾರದು. ಪಕ್ಷಾತೀತವಾಗಿ ಸಹಕಾರ ಸಂಘದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮೀಟಿಂಗ್ ಇದ್ದಾಗ ಟೀ, ಬಿಸ್ಕೆಟ್ ಹೊರತು ಪಡಿಸಿ ಬೇರೆ ಏನೂ ಸಹ ಸಹಕಾರ ಸಂಘಗಳಿಂದ ಅಪೇಕ್ಷೆ ಪಡಬಾರದು. ನಿಸ್ವಾರ್ಥ ಮನೋಭಾವ ಹೊಂದಿದ ಸಹಕಾರಿಗಳು ಸಹಕಾರ ಸಂಘಗಳಿಗೆ ಆಯ್ಕೆಯಾದರೆ ಸಹಕಾರ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ನಾನು ಐದು ವರ್ಷಗಳ ಕಾಲ ಮನ್ಮುಲ್ ನಿರ್ದೇಶಕನಾಗಿ ತಾಲ್ಲೂಕಿನ ಎಲ್ಲಾ ಹಾಲಿನ ಡೇರಿಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ.
ಯಾವತ್ತೂ ರಾಜಕೀಯ ಮಾಡಿಲ್ಲ. ಶಾಸಕನಾಗಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕು ಎಂದು ಮಹದಾಸೆಯನ್ನು ಹೊಂದಿರುತ್ತೇನೆ. ನನ್ನ ವಿಧಾನಸಭಾ ಕ್ಷೇತ್ರದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಸಹಕಾರ ಇಲಾಖೆಯ ಅನುಧಾನದಲ್ಲಿ ಎಲ್ಲಾ ಡೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಲು ಅಗತ್ಯ ಸಹಕಾರ ನೀಡುತ್ತೇನೆ. ಯಾವ ಡೇರಿಯಲ್ಲಿ ಸ್ವಂತ ಕಟ್ಟಡ ಇಲ್ಲವೋ ಅಂತಹ ಡೇರಿಯ ಆಡಳಿತ ಮಂಡಳಿಯವರು ನನಗೆ ಮನವಿ ಪತ್ರ ನೀಡಿದರೆ ತಕ್ಷಣ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರಾದ ಹೆಚ್.ಟಿ.ಮಂಜು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರು ಜೆಡಿಎಸ್ ಮುಖಂಡರಾದ ಮಲ್ಲೇನಹಳ್ಳಿ ಮೋಹನ್, ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು,ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಟಿ.ಲೋಕೇಶ್, ತಾಲ್ಲೂಕು ಟಿಸಿಎಪಿಸಿಎಂಎಸ್ ನಿರ್ದೇಶಕ ಕೊರಟೀಕೆರೆ ಕೆ.ಎಸ್.ದಿನೇಶ್, ಶಂಕರೇಗೌಡ, ಶಶಿಕಲಾಕುಮಾರ್, ಸಂತೋಷ್, ಭಾರತೀಪುರ ಸೊಸೈಟಿ ಮಾಜಿ ಅಧ್ಯಕ್ಷ ರವಿ, ಮುಖಂಡರಾದ ಕುಮಾರ್, ಸಂತೋಷ್. ಸಣ್ಣೇಗೌಡ, ನಂಜುಂಡೇಗೌಡ, ಶ್ರೀಕಂಠೇಗೌಡ, ರೇವಣ್ಣಗೌಡ, ಕೆ.ಎನ್.ನಂಜೇಗೌಡ, ತಮ್ಮಣ್ಣಗೌಡ, ಕೆ.ಆರ್.ಪ್ರಕಾಶ್, ವೆಂಕಟಶೆಟ್ಟಿ, ಕೃಷ್ಣೇಗೌಡ, ರತ್ನಯ್ಯ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್
