ಹಾಸನ : ತಾಲ್ಲೂಕಿನ ಪಾಳ್ಯ ಹೋಬಳಿಗೆ ಸೇರಿದ ತಾಳೂರು ಗ್ರಾಮದ ಸರ್ವೇ ನಂ.22/1ರಲ್ಲಿ ಇರುವ 0.37 ಎಕರೆ (27 ಗುಂಟೆ) ಜಮೀನು ರೈಲ್ವೆ ಇಲಾಖೆಗೆ ಭೂಸ್ವಾಧೀನವಾಗಿದ್ದು, ನೀಡಿರುವ ಪರಿಹಾರ ಹಣ ಅತಿ ಕಡಿಮೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಜಮೀನಿನಲ್ಲಿ ಸುಮಾರು 380 ಅಡಿಕೆ ಮರಗಳು, 38 ತೆಂಗಿನ ಮರಗಳು ಹಾಗೂ ಕಾಫಿ ಗಿಡಗಳು ಇದ್ದು, ಇದಕ್ಕಾಗಿ ರೈಲ್ವೆ ಇಲಾಖೆ ರೂ.20 ಲಕ್ಷ ಪರಿಹಾರ ಹಣ ಘೋಷಣೆ ಮಾಡಿದೆ. ಆದರೆ ಜಮೀನಿನ ಮೌಲ್ಯ ಹಾಗೂ ಬೆಳೆಗಳ ಸಂಖ್ಯೆಯನ್ನು ಪರಿಗಣಿಸಿದರೆ ಈ ಪರಿಹಾರ ಹಣ ಸಾಕಾಗುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಯೋಗೇಶ್ ಅವರು ತಿಳಿಸಿದರು.
ಈ ಜಮೀನನ್ನು ಬಿಟ್ಟರೆ ನಮಗೆ ಬೇರೆ ಯಾವುದೇ ಜಮೀನು ಇಲ್ಲ. ಈಗಾಗಲೇ ಎತ್ತಿನಹೊಳೆ ಯೋಜನೆಯ ವಸತಿ ಪುನರ್ವಸತಿಗೆ ಕೇವಲ ರೂ.5 ಲಕ್ಷ ಮಾತ್ರ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜಮೀನಿನ ನಿಜವಾದ ಮೌಲ್ಯವನ್ನು ಪರಿಗಣಿಸಿ ಹೆಚ್ಚುವರಿ ಪರಿಹಾರ ಹಣ ನೀಡುವಂತೆ ರೈಲ್ವೆ ಇಲಾಖೆಗೆ ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದರು.
ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್, ಮಂಜೇಗೌಡ, ಚಿನ್ನಾರ್, ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
