ಚನ್ನರಾಯಪಟ್ಟಣ: ಮಾ.14 ರಂದು ಬದುಕು ಫೌಂಡೇಶನ್ ವತಿಯಿಂದ ಪಟ್ಟಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಮುಖ್ಯಸ್ಥರಾದ ಛಾಯ ಕೃಷ್ಣ ಹೇಳಿದರು.
ಬೆಳಗ್ಗೆ 10 ಗಂಟೆಯಿಂದಲೇ ಬದುಕು ಫೌಂಡೇಶನ್ ಸದಸ್ಯರಿಗೆ ವಿವಿಧ ಬಗೆಯ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಕೆ.ಎಸ್.ಲತಾ ಕುಮಾರಿ ಅಧ್ಯಕ್ಷತೆ ವಹಿಸಲಿದ್ದು ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಡಾ.ಭಾರತಿ ರವೀಂದ್ರನಾಥ್ ಹಾಗೂ ಹಿರೀಸಾವೆ ಪೊಲೀಸ್ ಠಾಣೆಯ ಎಸ್ ಐ ರೂಪಾದೇವಿ ಬಿರಾದರ್ ಅವರು ಮಹಿಳೆಯರಿಗೆ ವಿಶೇಷ ಮಾಹಿತಿ ನೀಡಲಿದ್ದಾರೆ ಎಂದರು.
ಹೆಣ್ಣು ಮಕ್ಕಳು ಎಂದರೆ ಅಡುಗೆ ಮನೆಗೆ ಸೀಮಿತ ಎಂಬ ಕಾಲ ಮರೆಯಾಗಿ ಎಷ್ಟೋ ವರ್ಷಗಳು ಕಳೆದಿವೆ. ಅಡಿಗೆ ಮಾಡುವ ಕೈಗಳು ಇಂದು ದೇಶವನ್ನು ಆಳುತ್ತಿವೆ ಎಂಬುದೇ ನಮಗೆ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯ, ಹೈನುಗಾರಿಕೆ, ಶಿಕ್ಷಣ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹೆಣ್ಣು ಎಂದಿಗೂ ಹಬಲೆಯಲ್ಲ. ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವುದು ಮಹಿಳೆ ಎಂಬುದು ನಮ್ಮ ಹಿರಿಮೆ ಎಂದರು.
ಪ್ರಸಕ್ತ ದಿನಗಳಲ್ಲಿ ಶೇಕಡ 90 ರಷ್ಟು ಕುಟುಂಬಗಳು ಮಹಿಳೆಯರ ಸಾರಥ್ಯದಲ್ಲಿ ನಡೆಯುತ್ತಿವೆ. ಮಹಿಳೆ ಹೈನುಗಾರಿಕೆ ಸೇರಿದಂತೆ ವಿವಿಧ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾಳೆ, ಇಂತಹ ಶ್ರಮಜೀವಿ ಹಾಗೂ ಸಾಧನೀಯ ಮಹಿಳೆಯರಿಗೆಂದೇ ವಿಶ್ವ ಮಹಿಳಾ ದಿನ ಆಚರಣೆಯಲ್ಲಿರುವುದು ಒಂದು ವಿಶೇಷ ಸಂಗತಿ ಎಂದು ತಿಳಿಸಿದರು.
ಇನ್ನು ಬದುಕು ಫೌಂಡೇಶನ್ ಮಹಿಳೆಯರ ಕನಸಿನ ವೇದಿಕೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುತ್ತಿರುವುದು ಸಹಜವಾದರೂ ಮನೆಯಲ್ಲಿಯೇ ಕುಟುಂಬದ ನಿರ್ವಹಣೆಯೊಂದಿಗೆ ಮಹಿಳೆಯರು ದುಡಿದು ಆರ್ಥಿಕವಾಗಿ ಸಬಲೆಯಾಗಬೇಕು ಎಂಬುದೇ ಬದುಕು ಫೌಂಡೇಶನ್ ನ ಮುಖ್ಯ ಉದ್ದೇಶ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಶೋಭಾ ಮಾತನಾಡಿ, ಈಗಾಗಲೇ ಬದುಕು ಫೌಂಡೇಶನ್ ತಾಲೂಕಿಗೆ ಹೆಜ್ಜೆ ಇರಿಸಿದ್ದು ಈಗಷ್ಟೇ ನೆಲೆ ಕಾಣುತ್ತಿದೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ದುಡಿಮೆಯ ಮೂಲಕ ಸಾಬೀತುಪಡಿಸಿಕೊಳ್ಳಲು ಒಂದು ವೇದಿಕೆಯಾಗಿ ಬದುಕು ಫೌಂಡೇಶನ್ ಕೆಲಸ ಮಾಡಲಿದೆ. ಮತ್ತಷ್ಟು ವಿಶೇಷ ಯೋಜನೆಗಳೊಂದಿಗೆ ತಾಲೂಕಿನಾದ್ಯಂತ ವಿಸ್ತರಿಸುವ ಯೋಜನೆ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ವಿಶ್ವ ಮಹಿಳಾ ದಿನ ಆಚರಣೆ ಹಮ್ಮಿಕೊಳ್ಳಲಾಗಿದೆ.
ಬದುಕು ಫೌಂಡೇಶನ್ ಸದಸ್ಯರಾದ ರಂಜಿತಾ, ಲಲಿತಾ, ಐಶ್ವರ್ಯ ಹಾಗೂ ಇತರರು ಇದ್ದರು.
– ಮಂಜುನಾಥ್ ಐ.ಕೆ
