ಹಿಂದು ಸಂಪ್ರದಾಯದ ಪ್ರಕಾರ ಯಾವುದೇ ಮಂಗಳಕರ, ಶುಭಕರ ಮತ್ತು ಪವಿತ್ರ ಆರಾಧನೆ ವೇಳೆ ಮುತೈದೆಯರು ಕುಂಭ ಕಳಸಗಳನ್ನು ತಲೆಯ ಮೇಲೆ ಹೊತ್ತಿ ತರುವುದುಂಟು. ಕುಂಭವೆಂದರೆ ಬಿಂದಿಗೆಯ ಅಥವಾ ಪುಟ್ಟ ತಂಬಿಗೆಯ ಕಂಟ ಪೂರ್ತಿ ಬಾವಿ, ಕೆರೆ ಅಥವಾ ನದಿಗಳ ನೀರನ್ನು ತುಂಬಿಸಿ ದೈವತ್ವವನ್ನು ತುಂಬುವುದು. ಅಂದರೆ ಬಿಂದೆಗೆಯ ಒಳಗೆ ಗಂಗೆಯ ಜಲ ಶೇಖರಿಸಿದ್ದಾರೆ ಅನ್ನುವ ದೇವತಾ ಭಾವನಾತ್ಮಕ ನಂಬಿಕೆ. ತುಂಬಿದ ಕೊಡವನ್ನು ‘ಕಳಸ’ ಎಂದು ಕರೆಯುವರು.
ತುಂಬಿಸಿಟ್ಟ ನೀರು ಶ್ರೇಷ್ಠ ಮತ್ತು ದೇವರ ಮೇಲೆ ಅಭಿಷೇಕಕ್ಕೆ ಯೋಗ್ಯವೆಂದು ಪುರೋಹಿತರು ಹೇಳುತ್ತಾರೆ. ಏನೇ ಇರಲಿ, ಈ ಅಚರಣೆಗಳು ಆವರವರ ನಂಬಿಕೆಗಳು ಮತ್ತು ಭಾವನೆಗಳು. ನಾನು ಈ ಆಚರಣೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ಒಂದು ಪ್ರಯತ್ನ ಮಾಡುವೆ. ಒಂದು ಗಾದೆ ಇದೆ “ತುಂಬಿದ ಕೊಡ ಶಬ್ದ ಮಾಡುವುದಿಲ್ಲ”. ಅರ್ಧ ತುಂಬಿದ ಕೊಡದ ಆರ್ಭಟ ಹೆಚ್ಚು. ಈ ವಿಷಯವನ್ನು ಮಾನವನ “ತಲೆ ಬುರುಡೆ” ಗೆ ಹೋಲಿಸಿ ವಿವರಣೆಯನ್ನು ನೀಡುವ ಪ್ರಯತ್ನ ನನ್ನದು. ಈ ವಿವರಣೆ ವೈಯಕ್ತಿಕವಾದದ್ದು. ನಾವು ನೀರು ತುಂಬಿಸುವ ಕೊಡದ ರಂಧ್ರ ಒಂದು. ಈ ಕೊಡವನ್ನು ನೆಟ್ಟಗೆ ಇಟ್ಟಾಗ ನೀರು ಚೆಲ್ಲುವುದಿಲ್ಲ. ಆದರೇ ಇದೇ ಕೊಡ ತಲೆ ಕೆಳಗೆ ಮಾಡಿದಾಗ ನೀರೆಲ್ಲಾ ಸೋರುವದು. ಈಗ ತಲೆ ಕೆಳಗೆ ಮಾಡಿದ ಕೊಡವನ್ನು ಮಾನವನ ತಲೆ ಬುರುಡೆಗೆ ಹೋಲಿಸೋಣ. ಹೀಗಿದ್ದಾಗ ನಮ್ಮ ಕೊಡ ಅಥವಾ ತಲೆ ಹೇಗೆ ತುಂಬಲು ಸಾಧ್ಯ.
ನಮ್ಮ ತಲೆಯ ರಂಧ್ರ ಒಂದಲ್ಲ, ಏಳು ರಂಧ್ರಗಳು. ಇವುಗಳು ಒಂದು ಬಾಯಿ, ಎರಡು ಕಿವಿ, ಎರಡು ಕಣ್ಣು, ಒಂದು ಮೂಗಿನ ಎರಡು ರಂಧ್ರಗಳು. ನಮ್ಮ ಈ ಏಳು ರಂಧ್ರಗಳಲ್ಲಿ ಅನ್ಯೋನತೆ ಮತ್ತು ಸಮನ್ವಯತೆ ಕೊರತೆ ಇರುವುದರಿಂದ ಯಾವತ್ತು ನಮ್ಮ ತಲೆ ತುಂಬುವುದೇ ಇಲ್ಲ. ಇದರಿಂದಲೇ ಹೇಳುವದು ನಮ್ಮ ತಲೆ ಎಲ್ಲಾ ಕ್ಷಣದಲ್ಲೂ ಗಲಾಟೆ ಮಾಡುತ್ತಿರುತ್ತದೆ ಎಂದು. ಈ ಗಲಾಟೆಗಳು ಯಾವುದು ಎಂದರೆ ಭಯ, ಕಳವಳ, ಗಲಿಬಿಲಿ, ಗೊಂದಲ, ಇಲ್ಲದ ಯೋಚನೆ, ಅತಿ ಆಸೆಗಳು, ಇತ್ಯಾದಿ. ಮನುಷ್ಯನಿಗೆ ಇನ್ನೊಬ್ಬರ ಕಾಲು ಎಳೆಯುವದೆಂದರೆ ಬಹಳ ಖುಷಿ. ಸಾಂಕೇತಿಕವಾಗಿ ಕಿವಿ, ಕಣ್ಣಿನ ಕಾಲು ಎಳೆಯುವದು, ಕಣ್ಣು, ಮೂಗಿನ ಕಾಲು ಎಳೆಯುವುದು, ಹೀಗೆ. ಈ ಕಾರಣದಿಂದ ಸಾಂಕೇತಿಕವಾಗಿ ಮೂಗಿನ ಉಸಿರಾಟದ ಸಮಸ್ಯೆ ಆಗಬಹುದು ಎಂದುಕೊಳ್ಳೊಣ. ಉದಾಹರಣೆಗೆ, ಮೇಲ್ ಉಸಿರಾಟ. ಇದರಿಂದ ಕೈ ಕಾಲು ನಡಕ, ಹೃದಯ ಬಡಿತ, ಸುಸ್ತು, ಕಸಿವಿಸಿ, ಏಕಾಗ್ರತೆ ಮತ್ತು ಗಮನಗಳ ಸಮಸ್ಯೆ, ನಿದ್ರಾ ಹೀನತೆ ಇತ್ಯಾದಿ.
ಈಗ ತಲೆಯನ್ನು ತುಂಬಿಸಿಕೊಳ್ಳುವುದು ಹೇಗೆ? ಸಾಕ್ಷ್ಯ ಇಲ್ಲದ ವಿಷಯಗಳನ್ನು ಕೇಳಬಾರದು, ಕೆಟ್ಟದನ್ನು ನೋಡಬಾರದು, ಒಳ್ಳೆಯ ನುಡಿಗಳನ್ನು ನುಡಿಯಬೇಕು ಮತ್ತು ನಮ್ಮ ಉಸಿರನ್ನು ನಿಯಂತ್ರದಲ್ಲಿ ಇಡುವುದರಿಂದ ಸಾಧ್ಯ. ನಾನು ತಲೆಕೆಳಗಾದ ಬಿಂದಿಗೆಗೆ ತಲೆಯನ್ನು ಹೋಲಿಸಿದಾಗ ಮಾನವರು ತಮ್ಮ ತಮ್ಮ ಇಂದ್ರಿಯಗಳನ್ನು ಹಿಡತದಲ್ಲಿ ಇಟ್ಟುಕೊಳ್ಳಬೇಕೆಂಬುದು ಅರ್ಥ. ಇಟ್ಟಾಗ ಮಾತ್ರ ನಮ್ಮ ಏಳು ರಂಧ್ರಗಳನ್ನು ಮುಚ್ಚಬಹುದು. ಮುಚ್ಚಿದಾಗ ಮನುಷ್ಯ ಪರಿ ಪೂರ್ಣತೆಯನ್ನು ಹೊಂದುತ್ತಾನೆ. ಮಾನವ ಬುದ್ಧನಾಗುತ್ತಾನೆ. ಮೌನವನ್ನು ವೃದ್ಧಿಸುತ್ತಾನೆ. ಶಬ್ದಗಳು ಇಲ್ಲದಂತೆ ಆಗುತ್ತದೆ. ಮನಸ್ಸೆಂಬ ಬಿಂದಿಗೆ ಪೂರ್ಣಗೊಂಡು ಹಗುರವಾಗುತ್ತದೆ. ಪಕ್ಷಿಯಂತೆ ಹಾರಾಡುತ್ತಾನೆ. ಆಗ ಪ್ರಪಂಚವೆಲ್ಲವೂ ಅವನದೇ ಆಗಿರುತ್ತದೆ.
ಹಿಂದು ಸಂಪ್ರದಾಯದಲ್ಲಿ ಹೆಣ್ಣಿಗೆ ಹೆಚ್ಚು ಸ್ಥಾನ ಮಾನ ನೀಡಲಾಗಿದೆ. ನನಗೆ ತಿಳಿಯದೇ ಇರುವ ವಿಷಯ ಏನಂದರೆ ಭಗವಂತನು ಹೆಣ್ಣಿಗೆ ನೀಡಿದ ವರ “ಮುಟ್ಟು”, ಆದರೆ ಆಕೆ ಮುಟ್ಟಾದ ಒಡನೆ ಯಾಕೆ ಅವಳನ್ನು ಭಗವಂತ ತಿರಸ್ಕರಿಸುವನು? ಮುಟ್ಟಾದ ಹುಡ್ಗಿ ಅಥವ ಹೆಂಗಸು ದೇವಸ್ಥಾನದ ಒಳಗೆ ಹೋಗುವಂತಿಲ್ಲ ಮತ್ತು ಕುಂಭವನ್ನು ತಲೆಯ ಮೇಲೆ ಹೋರುವಂತಿಲ್ಲ. ಇದ್ಯಾವ ನ್ಯಾಯ? ಕಾರಣ ಏನಿರಬಹುದು? ವೈಜ್ಞಾನಿಕವಾಗಿ ತಿಳಿಯುವ ಪ್ರಯತ್ನದಲ್ಲಿದ್ದಾಗ ನನಗೆ ಹೊಳೆದ ವಿಷಯ, ಹೆಣ್ಣಿಗೆ “ಪೀರ್ಯಡ್” ಅಥವ “ಮುಟ್ಟು” ಒಂದು ಭೂಷಣ. ಮುಟ್ಟು ಇಲ್ಲದಿದ್ದರೆ ಆಕೆ ಗರ್ಭವತಿ ಆಗುವುದದೇ ಇಲ್ಲ. ಅಂಡಾಣು “ಯೂಟಿರಸ್” ಅಥವ “ಗರ್ಭ ಚೀಲ” ದ ಒಳಗೆ ಬರಬೇಕಾದರೆ ನೈಸರ್ಗಿಕ ಕ್ರಿಯೆ ಮುಟ್ಟು ಅತಿ ಮುಖ್ಯವಾದ ಪಾತ್ರ ವಹಿಸುತ್ತದೆ. ನಾನು ಈ ಕ್ರಿಯೆಗಳ ಬಗ್ಗೆ ವಿಸ್ತೃತವಾಗಿ ತಿಳಿಸುವ ಪ್ರಯತ್ನ ಮಾಡುವುದಿಲ್ಲ.
ಮುಟ್ಟಾಗುವ ಮುನ್ನ ಕೆಲವು ಹೆಂಗಳೆಯರಿಗೆ “ಪ್ರಿ ಮೆನ್ಸ್ಟ್ರುಯಲ್ ಟೆನ್ಶನ್” ಎಂಬ ಮಾನಸಿಕ ತೂಂದರೆಗೆ ಈಡಾಗುತ್ತಾರೆ. ಈ ಸಮಯದಲ್ಲಿ ಹೆಣ್ಣಿಗೆ ಬೇಕಾದ ಹಾರ್ಮೋನ್ಗಳು ಮೆದುಳಿನ ಮೇಲೆ ಪರಿಣಾಮ ಬೀರಿ ಸಿಡಿಮಿಡಿ, ಚಡಪಡಿಕೆ, ಉದ್ವೇಗ, ಸಿಟ್ಟು, ಮಂಕು, ಗಮನವಿಲ್ಲದೆ ಇರುವದು ಮತ್ತು ಶಾರೀರಿಕವಾಗಿ ಹೊಟ್ಟೆ ನೋವು, ಮೈ ಕೈ ನೋವು ಸರ್ವೇ ಸಾಮಾನ್ಯವಾಗಿ ಇರುತ್ತದೆ. ಈ ಸಮಯದಲ್ಲಿ ಹೆಣ್ಣಿಗೆ ವಿಶ್ರಾಂತಿ ಅಗತ್ಯ. ಆದುದರಿಂದ ಆದಿ ಕಾಲದಿಂದಲೂ ಹಿಂದೂ ಸಂಪ್ರದಾಯದಲ್ಲಿ ಹಿರಿಯರು ಪ್ರತ್ಯೇಕ ಕೊಠಡಿಯಲ್ಲಿ ಮುಟ್ಟು ನಿಲ್ಲೋವರಿಗೂ ವಿಶ್ರಮಿಸಲು ಹೇಳುತ್ತಿದ್ದರು. ಇಂತಹ ಸಮಯದಲ್ಲಿ ಗುಡಿಯಲ್ಲಿ ದೇವರಿಗೆ ಹೇಗೆ ಪ್ರಾರ್ಥನೆಯನ್ನು ಸಲ್ಲಿಸುವರು. ದೇವರಿಗೆ ಬೇಕಾಗಿರುವುದು ಗಮನ, ಏಕಾಗ್ರತೆ ಮತ್ತು ಭಕ್ತಿ. ಈ ಕಾರಣಗಳಿಂದ ಮುಟ್ಟಾದವರು ದೇವಸ್ಥಾನಗಳಿಗೆ ಹೋಗುವುದನ್ನು ನಿಷೇಧಿಸಲಾಗಿತ್ತು ಎಂಬುದು ನನ್ನ ಅನ್ನಿಸಿಕೆ. ಅನೇಕ ಆರಾಧನಾ ಕಾರ್ಯಗಳಿಗೆ ಅತಿಯಾದ ಗಮನವನ್ನು ನೀಡ ಬೇಕಾಗುತ್ತದೆ. ಆದುದರಿಂದ ಇಂತಹ ಕಾರ್ಯಗಳಿಗೆ ಮುಟ್ಟಾದವರನ್ನು ನಮ್ಮ ಸಂಪ್ರದಾಯ ಬಿಡುವುದಿಲ್ಲ ಎಂಬ ಉಲ್ಲೇಖನ ಪುರಾಣಗಳಲ್ಲಿ ಇವೆ.
ಈಗಷ್ಟೇ ಹೆಂಗಸರನ್ನು ಕೆಲವು ದೇವಸ್ಥಾನಗಳ ಒಳಗೆ ಬಿಡಬೇಕೋ ಅಥವ ಬಿಡಬಾರದೋ ಎಂಬುದರ ಬಿರುಸಿನ ಪರ ಮತ್ತು ವಿರುದ್ಧ ಚರ್ಚೆಗಳು ನಡೆದುಹೋಗಿವೆ. ಘನ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ವಾದ ಮತ್ತು ಪ್ರತಿವಾದಗಳು ಆಗೀವೆ. ಸರ್ವೋಚ್ಚ ನ್ಯಾಯಾಧೀಶರು ತಮ್ಮ ತೀರ್ಪನ್ನು ನಂಬಿಕೆ ಪರ ನೀಡಿದ್ದೂ ಆಗಿದೆ. ನನ್ನ ಒಂದು ಮಾತು, ನ್ಯಾಯಾಂಗ ಧರ್ಮ ನಂಬಿಕೆಗಳ ಪರ ವಿರುದ್ಧ ನ್ಯಾಯವನ್ನು ನೀಡುವ ಮುನ್ನ ವಿಜ್ಞಾನವನ್ನು ಪರಿಗಣಿಸುವ ಅಗತ್ಯವಿದೆ…
God has never asked a menstruating woman not to come inside a temple. Mythologically He avoids menstruating girls or women because of their irritability, inattention that might occur by their hormones. This leads to lack of concentration also….
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

