ಆಲೂರು : ಸಾಮಾಜಿಕ, ಕೌಟುಂಬಿಕ ಹಾಗೂ ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿರುವ ವರ್ತಮಾನದ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಉತ್ತಮ ನಾಗರೀಕರನ್ನಾಗಿ ಸೃಜಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ರಂಗೇಗೌಡ ಅಭಿಪ್ರಾಯಪಟ್ಟರು.
ಅವರು ತಮ್ಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಹಮ್ಮಿಕೊಂಡಿದ್ದ ದಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್ ಮಕ್ಕಳಲ್ಲಿ ಸೃಜನಾತ್ಮಕ ಆಲೋಚನೆಗಳನ್ನು ಹುಟ್ಟು ಹಾಕುವುದರ ಜೊತೆಗೆ ಪ್ರಕೃತಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಜೀವನ ಕೌಶಲಗಳನ್ನು ವೃದ್ಧಿಸುತ್ತದೆ. ಸರಳ ಜೀವನ ಕ್ರಮಗಳನ್ನು ಪರಿಚಯಿಸುತ್ತದೆ. ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿ ಸಹ ಈ ಚಳವಳಿಯ ಭಾಗವಾಗಬೇಕು.
ಇದೊಂದು ಜಾಗತಿಕ ಸಂಸ್ಥೆಯಾಗಿದ್ದು ಮಕ್ಕಳ ಅಭ್ಯುದಯಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಪಠ್ಯಪುಸ್ತಕ ಕಲಿಸಲಾರದ ನೂರಾರು ಜೀವನ ಮೌಲ್ಯಗಳನ್ನು ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ. ನಾನೂ ಸಹ ಮೂಲ ತರಬೇತಿ, ಮುಂದುವರಿದ ತರಬೇತಿ ಪಡೆದಿದ್ದು ವೈಯಕ್ತಿಕ ಮೌಲಿಕ ಜೀವನ ಸಾಗಿಸಲು ಈ ಚಳವಳಿ ನೆರವಾಗಿದೆ. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಸಂಯಮ, ಸೇವಾ ಮನೋಭಾವನೆ ಬಹಳ ಮುಖ್ಯ. ಈ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರಮುಖ ಉದ್ದೇಶವನ್ನು ಈ ಸಂಸ್ಥೆ ಹೊಂದಿರುವುದರಿಂದ ಎಲ್ಲಾ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ಕೌಟಿಂಗ್ ಈಸ್ ಔಟಿಂಗ್ ಎಂಬಂತೆ ಮಕ್ಕಳಿಗೆ ಈ ಚಳವಳಿ ಹೊರಜಗತ್ತಿನ ಪರಿಚಯ ಮಾಡುವುದರ ಜೊತೆಗೆ ಸಾಮಾಜಿಕ ಜ್ಞಾನವನ್ನು ಬೆಳಸುತ್ತದೆ. ಶಿಸ್ತು, ಸೇವೆ, ಸಂಯಮದ ಜೊತೆಗೆ ಹಿರಿಯರಿಗೆ, ವೃದ್ಧರಿಗೆ, ದುರ್ಬಲರಿಗೆ ಬಲವಾಗು,ಸಸಫಸಸ ಹೆಗಲಾಗುವ, ಸಹಾಯ ಮಾಡುವ ಉದಾತ್ತ ಗುಣಗಳನ್ನು ಬೆಳೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಆರ್.ಎಸ್. ರಮೇಶ್, ರಾಜ್ಯ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಮುಖ್ಯಶಿಕ್ಷಕಿ ಸಂಧ್ಯಾಜಯರಾಂ, ಸ್ಕೌಟ್ ಮಾಸ್ಟರ್ ಶಿವಶಂಕರ್, ಸಹ ಶಿಕ್ಷಕ ಮೋಹನ್, ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
