ಬೆಂಗಳೂರು, ಮಾ.19: ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ (ಡ್ರಗ್ ಟೆಸ್ಟ್) ಒಳಪಡಿಸುವ ಮಹತ್ವದ ಕ್ರಮವನ್ನು ಕಾರಾಗೃಹ ಇಲಾಖೆ ಆರಂಭಿಸಿದ್ದು, ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ.
ರಾಜ್ಯಾದ್ಯಂತ ಜೈಲು ಅಧಿಕಾರಿಗಳು ಹಂತ ಹಂತವಾಗಿ ಕೈದಿಗಳ ಡ್ರಗ್ ಟೆಸ್ಟ್ ನಡೆಸುತ್ತಿದ್ದು, ಪ್ರಾಥಮಿಕ ಹಂತದಲ್ಲೇ ಮಹಿಳಾ ಕೈದಿಗಳಲ್ಲೇ ಹೆಚ್ಚು ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಗಮನಾರ್ಹವಾಗಿದೆ.
ಮಹಿಳಾ ಕೈದಿಗಳಲ್ಲಿ ಹೆಚ್ಚು ವ್ಯಸನ ಪತ್ತೆ
ಡ್ರಗ್ ಟೆಸ್ಟ್ ವೇಳೆ ಮಹಿಳಾ ಕೈದಿಗಳಲ್ಲೇ ಹೆಚ್ಚು ಪಾಸಿಟಿವ್ ವರದಿಗಳು ಕಂಡುಬಂದಿದ್ದು, ಪಾಸಿಟಿವ್ ಬಂದವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸಂಗ್ರಹಿಸಲಾದ ಸ್ಯಾಂಪಲ್ಗಳನ್ನು ನಿಮಾನ್ಸ್ಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ವ್ಯಸನದ ಪ್ರಮಾಣ ಮತ್ತು ಸ್ವರೂಪ ಸ್ಪಷ್ಟವಾಗಲಿದೆ. ಅದರ ಆಧಾರದ ಮೇಲೆ ಮುಂದಿನ ಚಿಕಿತ್ಸೆ ನೀಡಲಾಗುವುದು ಎಂದು ತಿಳಿದುಬಂದಿದೆ.
ಡ್ರಗ್ ಪರೀಕ್ಷೆಯಲ್ಲಿ ವಿಶೇಷವಾಗಿ ವಿಚಾರಣಾಧೀನ ಕೈದಿಗಳಲ್ಲೇ ಮಾದಕ ವ್ಯಸನ ಹೆಚ್ಚಿರುವುದು ಪತ್ತೆಯಾಗಿದ್ದು, ಶಿಕ್ಷೆ ಅನುಭವಿಸುತ್ತಿರುವ ಸಜಾ ಕೈದಿಗಳಲ್ಲಿ ಹೆಚ್ಚಿನ ಪ್ರಮಾಣದ ವ್ಯಸನ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಯೂರಿನ್ ಸ್ಯಾಂಪಲ್ ವೇಳೆ ಕಳ್ಳಾಟ
ಡ್ರಗ್ ಟೆಸ್ಟ್ಗೆ ಯೂರಿನ್ ಸ್ಯಾಂಪಲ್ ಸಂಗ್ರಹಿಸುವ ವೇಳೆ ಕೆಲ ಮಹಿಳಾ ಕೈದಿಗಳು ಕಳ್ಳಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಯೂರಿನ್ ಬದಲಿಗೆ ನೀರು ಮಿಶ್ರಣ ಮಾಡಿ ಸ್ಯಾಂಪಲ್ ನೀಡಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ಪ್ರಶ್ನಿಸಿದಾಗ “ನಾವು ಏಕೆ ಕೊಡಬೇಕು?” ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಬಳಿಕ ಒತ್ತಾಯಿಸಿದಾಗ ಯೂರಿನ್ಗೆ ನೀರು ಮಿಶ್ರಣ ಮಾಡಿ ಕೊಟ್ಟಿರುವುದು ತಿಳಿದುಬಂದಿದೆ.
ಈ ಕಾರಣದಿಂದಾಗಿ ಪಾಸಿಟಿವ್ ಬಂದಿರುವ ನಿಖರ ಸಂಖ್ಯೆ ಇನ್ನೂ ಅಂತಿಮವಾಗಿಲ್ಲ. ಸದ್ಯ ಜೈಲಿನ ವೈದ್ಯರು ಶೇಕಡಾ 10ರಷ್ಟು ಕೈದಿಗಳಿಗೆ ಮಾತ್ರ ಪರೀಕ್ಷೆ ನಡೆಸುತ್ತಿದ್ದು, ಮುಂದಿನ ಹಂತದಲ್ಲಿ ಎಲ್ಲ ಕೈದಿಗಳಿಗೂ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಐದು ಮಾದರಿಯ ಡ್ರಗ್ಗಳ ಪರೀಕ್ಷೆ
ಕಾರಾಗೃಹ ಇಲಾಖೆ ಜೈಲಿನ ವೈದ್ಯರಿಗೆ ಡ್ರಗ್ ಟೆಸ್ಟ್ ಕಿಟ್ಗಳನ್ನು ಒದಗಿಸಿದ್ದು, ಅದರ ಮೂಲಕ ಕೈದಿಗಳ ಪರೀಕ್ಷೆ ನಡೆಯುತ್ತಿದೆ. ಸದ್ಯ ಎಂಡಿಎಂಎ, ಗಾಂಜಾ, ಹೆರಾಯಿನ್, ಕೊಕೇನ್ ಸೇರಿದಂತೆ ಒಟ್ಟು ಐದು ವಿಧದ ಮಾದಕ ವಸ್ತುಗಳ ಬಳಕೆಗೆ ಪರೀಕ್ಷೆ ನಡೆಸಲಾಗುತ್ತಿದೆ.
ಬೆಂಗಳೂರು ಮತ್ತು ಮೈಸೂರು ಜೈಲುಗಳಲ್ಲಿ ಎಲ್ಲಾ ಮಾದರಿಯ ಡ್ರಗ್ ಟೆಸ್ಟ್ ನಡೆಸಲಾಗುತ್ತಿದ್ದು, ಇತರೆ ಜೈಲುಗಳಲ್ಲಿ ಪ್ರಸ್ತುತ ಗಾಂಜಾ ಸೇವನೆ ಪರೀಕ್ಷೆ ಮಾತ್ರ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮಾದಕ ವಸ್ತು ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ
ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಾರಾಗೃಹ ಇಲಾಖೆ ಕೈಗೊಂಡಿರುವ ಈ ಕ್ರಮ ಮಹತ್ವ ಪಡೆದಿದ್ದು, ಮುಂದಿನ ದಿನಗಳಲ್ಲಿ ಪರೀಕ್ಷೆಯ ವ್ಯಾಪ್ತಿಯನ್ನು ವಿಸ್ತರಿಸುವ ಸಾಧ್ಯತೆ ಇದೆ.
