ರಾಮನಾಥಪುರ, ಮಾ.20: ವಿದ್ಯೆಯ ಅಧಿಪತಿಯಾದ ಶ್ರೀ ಹಯಗ್ರೀವಮೂರ್ತಿಗೆ ಶ್ರವಣ ನಕ್ಷತ್ರದ ಪ್ರಯುಕ್ತ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಹಯಗ್ರೀವ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ದೇವಾಲಯದ ಮುಖ್ಯ ಪುರೋಹಿತರಾದ ವೇ. ಕಸ್ತೂರಿರಂಗಚಾರ್ ಅವರು ಹಯಗ್ರೀವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರವಣ ನಕ್ಷತ್ರದ ದಿನ ವಿದ್ಯಾರ್ಥಿಗಳು ಹಯಗ್ರೀವ ದೇವರ ಪೂಜೆ ಮಾಡಿಸಿದರೆ ಉತ್ತಮ ವಿದ್ಯೆ ಪ್ರಾಪ್ತಿಯಾಗಿ ಜ್ಞಾನವೃದ್ಧಿಯಾಗುತ್ತದೆ ಎಂಬ ನಂಬಿಕೆ ನಮ್ಮ ಸಂಪ್ರದಾಯದಲ್ಲಿದೆ ಎಂದು ತಿಳಿಸಿದರು.
ಇದಲ್ಲದೆ, ನಮ್ಮ ಸನಾತನ ಸಂಸ್ಕೃತಿ ಮತ್ತು ಪರಂಪರೆ ಇಂದಿಗೂ ಗ್ರಾಮೀಣ ಪ್ರದೇಶಗಳ ದೇವಾಲಯಗಳಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಮುಂದುವರಿದಿದೆ. ದೇವಾಲಯಗಳಲ್ಲಿ ನಡೆಯುವ ಪೂಜಾಕೈಂಕರ್ಯಗಳು ಧಾರ್ಮಿಕ ಚಿಂತನೆಗೆ ಉತ್ತೇಜನ ನೀಡುವುದರ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನೂ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರ್ಚಕರಾದ ವೇ. ಮೋಹನ್, ಪಟ್ಟಾಭಿರಾಮ ದೇವಾಲಯದ ಮಾಜಿ ಕನ್ವೀನರ್ ಅರ್.ಎಸ್. ನರಸಿಂಹಮೂರ್ತಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ
