ನವದೆಹಲಿ, ಮಾ.22: “ಪತಿಯ ಆದಾಯವನ್ನು ಮನೆಯಲ್ಲಿರುವ ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಹೀಗೆ ವಿವಿಧ ಗೃಹಕಾರ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಕುಟುಂಬದ ಹೊಣೆಗಾರಿಕೆಗಳಲ್ಲಿ ಮಹಿಳೆಯಷ್ಟೇ ಅಲ್ಲ, ಪತಿಯೂ ಸಮಾನವಾಗಿ ಪಾಲ್ಗೊಳ್ಳಬೇಕು,” ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪತ್ನಿ ಸಂಬಳ ತರುತ್ತಾಳೆ ಎಂಬ ಕಾರಣಕ್ಕೆ ಮನೆಯಲ್ಲಿನ ಎಲ್ಲಾ ಕೆಲಸಗಳ ಜವಾಬ್ದಾರಿ ಅವಳ ಮೇಲೇ ಇರಬೇಕು ಎಂಬ ಮನೋಭಾವ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪತಿ-ಪತ್ನಿಯರ ಸಂಬಂಧದಲ್ಲಿ ಪರಸ್ಪರ ಸಹಕಾರ, ಗೌರವ ಮತ್ತು ಜವಾಬ್ದಾರಿತನ ಇರಬೇಕು. ಅಡುಗೆ, ಸ್ವಚ್ಛತೆ, ಬಟ್ಟೆ ಒಗೆಯುವುದು ಸೇರಿದಂತೆ ಮನೆಗೆ ಸಂಬಂಧಿಸಿದ ದಿನನಿತ್ಯದ ಕೆಲಸಗಳನ್ನು ಪತಿಯೂ ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ತನ್ನ ಪತಿಯ ಮನೆಯಲ್ಲಿ ಮತ್ತು ಅತ್ತೆ-ಮಾವನೊಂದಿಗೆ ವಾಸಿಸಲು ಸಿದ್ಧಳಿದ್ದರೂ, ಪತಿ ಮಾತ್ರ ಅವಳನ್ನು ಪೀಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಮಹತ್ವದ ಅಭಿಮತ ವ್ಯಕ್ತಪಡಿಸಿದರು.
ಇದು ಕೇವಲ ಒಂದು ಪ್ರಕರಣಕ್ಕೆ ಸೀಮಿತವಾಗಿಲ್ಲ; ಕುಟುಂಬ ಜೀವನದಲ್ಲಿ ಸಮಾನತೆ ಮತ್ತು ಪರಸ್ಪರ ಜವಾಬ್ದಾರಿತನ ಅಗತ್ಯವೆಂಬ ಸಾಮಾಜಿಕ ಸಂದೇಶವನ್ನೂ ಈ ತೀರ್ಪು ನೀಡಿದೆ ಎಂದು ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ.
