ಕೊರಟಗೆರೆ :- ಪಟ್ಟಣದಲ್ಲಿ ಅಪರಿಚಿತರು ನಿಲ್ಲಿಸಿದ್ದ ವಾಹನಗಳ ಗ್ಲಾಸ್ಗಳನ್ನು ಪುಡಿ ಪುಡಿಯಾಗಿ ಒಡೆದು ಹಾನಿ ಮಾಡಿದ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ ವಿವಿಧ ಬೀದಿಗಳಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಗ್ಲಾಸ್ಗಳು ಬೆಳಗ್ಗೆ ಒಡೆದ ಸ್ಥಿತಿಯಲ್ಲಿ ಕಂಡುಬಂದವು. ಸುಮಾರು 10 ರಿಂದ 15 ವಾಹನಗಳಿಗೆ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಈ ಘಟನೆ ತಿಳಿದು ಸ್ಥಳೀಯರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೊರಟಗೆರೆ ಸಿಪಿಐ ಅನಿಲ್ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆ, ಸ್ಥಳೀಯರು ರಾತ್ರಿ ವೇಳೆಯಲ್ಲಿ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಲು ಆಗ್ರಹಿಸಿದ್ದಾರೆ, ಪಟ್ಟಣದಲ್ಲಿ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
” 2 ಗಂಟೆಯಲ್ಲಿ ಆರೋಪಿಗಳ ಎಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸ್ ”
ಕೊರಟಗೆರೆ ಪೊಲೀಸ್ ಸಿಪಿಐ ಅನಿಲ್ ಹಾಗೂ ಪಿಎಸ್ಐ ತೀರ್ಥೇಶ್ ಮತ್ತು ತಂಡ ಘಟನೆ ನಡೆದ ಎರಡೆ ಗಂಟೆಯಲ್ಲಿ ತುಮಕೂರಿನ ಪುಂಡರನ್ನ ಎಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸ್ ನವರು ಸಂತೋಷ್ , ಕಲ್ಯಾಣ್, ಹರೀಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿ ಮತ್ತೆ ಮೂವರ ಬಂಧನಕ್ಕೆ ಪೊಲೀಸ್ರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
– ಶ್ರೀನಿವಾಸ್ ಕೊರಟಗೆರೆ.
