ಕೆ.ಆರ್.ಪೇಟೆ, ಜು.23: ತಾಲೂಕಿನ ಅಭಿವೃದ್ಧಿಯ ಹರಿಕಾರ, ಮಾಜಿ ಸಂಸದ, ಮಾಜಿ ಸಚಿವ ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರ ಜನ್ಮದಿನದ ಅಂಗವಾಗಿ ಜುಲೈ 25ರಂದು ಬೆಳಿಗ್ಗೆ 10.30ಕ್ಕೆ ಅಗ್ರಹಾರಬಾಚಹಳ್ಳಿ ಗೇಟ್ನಲ್ಲಿರುವ ಜಯಮ್ಮ-ರಾಮಸ್ವಾಮಿ ಸಮುದಾಯ ಭವನದಲ್ಲಿ ‘ಕೃಷ್ಣ ಪುರಸ್ಕಾರ’ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ತಾಲೂಕು ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿರುವ ಕೃಷ್ಣ ಪ್ರತಿಷ್ಠಾನದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಕೃಷ್ಣ ಪುರಸ್ಕಾರವನ್ನು ಪದ್ಮಶ್ರೀ ಪುರಸ್ಕೃತ ಪುಸ್ತಕದ ಮನೆ ಅಂಕೇಗೌಡ, ಸಾಹಿತಿ ಬಿ.ಆರ್. ರಾಮೇಗೌಡ ಹಾಗೂ ಪ್ರಗತಿಪರ ರೈತ ಮಹಿಳೆ ಹೆಮ್ಮನಹಳ್ಳಿ ಪವಿತ್ರ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು.
ಇದೇ ವೇಳೆ ಕಳೆದ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಜೊತೆಗೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ಗ್ರಾಮದ ಡಾ. ಮುತ್ತೇಶ್ ಗೌಡ ಅವರಿಗೆ ವಿಶೇಷ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಹೆಚ್.ಟಿ. ಮಂಜು, ಮಾಜಿ ಸಚಿವ ನಾರಾಯಣಗೌಡ, ಮಾಜಿ ಸ್ಪೀಕರ್ ಕೃಷ್ಣ ಅವರ ಧರ್ಮಪತ್ನಿ ಪ್ರೊ. ಇಂದಿರಮ್ಮ ಕೃಷ್ಣ, ಮಾಜಿ ಶಾಸಕರು ಎಂ. ಪುಟ್ಟಸ್ವಾಮೀಗೌಡ, ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಬಿ.ಎಲ್. ದೇವರಾಜು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ತಾಲೂಕಿನ ಮಾಜಿ ಸ್ಪೀಕರ್ ಕೃಷ್ಣ ಅವರ ಅಭಿಮಾನಿಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜವರಾಯಿಗೌಡ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣ ಪ್ರತಿಷ್ಠಾನದ ಪದಾಧಿಕಾರಿಗಳಾದ ಬೂಕನಕೆರೆ ಬಿ. ಜವರಾಯಿಗೌಡ, ಸಂತೇಬಾಚಹಳ್ಳಿ ನಾಗರಾಜು, ರಾಯಸಮುದ್ರ ಶಿವರಾಮೇಗೌಡ, ಹಾದನೂರು ಪರಮೇಶ್, ಮಾಕವಳ್ಳಿ ವಸಂತಕುಮಾರ್, ಕತ್ತರಘಟ್ಟ ವಾಸು, ಹೊಸಹೊಳಲು ಮಂಜುಳಾ ಚನ್ನಕೇಶವ, ಹೆಮ್ಮನಹಳ್ಳಿ ಹೆಚ್.ಜೆ. ರಮೇಶ್, ಶಂಭುಲಿಂಗಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
