ರಾಮನಾಥಪುರ, ಮಾ.26: ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಧಾರ್ಮಿಕ ಪ್ರಜ್ಞೆ ವೃದ್ಧಿಯಾಗಬೇಕಾದರೆ ಅಧ್ಯಾತ್ಮ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಮನಾಥಪುರದ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರಾದ ವಿದ್ವಾನ್ ಕನಕಾಚಾರ್ಯರು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಸಂಜೆ ರಾಘವೇಂದ್ರಸ್ವಾಮಿಗಳ ಚಿಕ್ಕರಥೋತ್ಸವ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ನೆರವೇರಿತು. ಮಠದ ಒಳಾಂಗಣದಲ್ಲಿ ಭಕ್ತರು ಭಕ್ತಿಭಾವದಿಂದ ಚಿಕ್ಕರಥವನ್ನು ಎಳೆದರು. ಬಳಿಕ ಆಶೀರ್ವಚನ ನೀಡಿದ ವಿದ್ವಾನ್ ಕನಕಾಚಾರ್ಯರು, ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಪರಿಹರಿಸಲು ಶ್ರೀ ರಾಘವೇಂದ್ರಸ್ವಾಮಿಗಳು ಈ ಭೂಮಿಯಲ್ಲಿ ಅವತರಿಸಿದ್ದರು ಎಂದು ಹೇಳಿದರು.

ಶ್ರೀ ರಾಘವೇಂದ್ರಸ್ವಾಮಿಗಳು ಸಕಲ ವಿದ್ಯೆಗಳಲ್ಲಿ ಪಾರಂಗತರಾಗಿದ್ದು, ಸಮಾಜದಲ್ಲಿ ಭಕ್ತಿ, ಧರ್ಮ ಹಾಗೂ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಬದುಕು ನಡೆಸಿದ ಮಹಾನ್ ಪುರುಷರು. ಅವರು ತೋರಿದ ಧರ್ಮಮಾರ್ಗವನ್ನು ನಾವು ಅಳವಡಿಸಿಕೊಂಡು ನಡೆಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ಶ್ರೀಮಠದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
