ಬೆಂಗಳೂರು, ಮಾ.26: ಮಹಾವೀರ ಜಯಂತಿ ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ 2026ರ ಎಸ್ಎಸ್ಎಲ್ಸಿ ಪರೀಕ್ಷೆ-1ರ ತೃತೀಯ ಭಾಷೆ ವಿಷಯದ ಪರೀಕ್ಷೆಯ ದಿನಾಂಕವನ್ನು ಬದಲಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಈ ಹಿಂದೆ ಪ್ರಕಟಿಸಿದ್ದ ಅಂತಿಮ ವೇಳಾಪಟ್ಟಿಯಂತೆ ಮಾರ್ಚ್ 30, 2026ರಂದು ನಡೆಯಬೇಕಿದ್ದ ತೃತೀಯ ಭಾಷೆ ಪರೀಕ್ಷೆಯನ್ನು ಇದೀಗ ಮಾರ್ಚ್ 31, 2026ರ ಮಂಗಳವಾರ ನಡೆಸಲಾಗುವುದು ಎಂದು ತಿಳಿಸಿದೆ.
2026ರ ಎಸ್ಎಸ್ಎಲ್ಸಿ ಪರೀಕ್ಷೆ-1 ಅನ್ನು ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಸಲು 2025ರ ನವೆಂಬರ್ 4ರಂದು ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಅದರಂತೆ ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿವೆ. ಆದರೆ ಸರ್ಕಾರ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಿದ್ದ ಸಾರ್ವತ್ರಿಕ ರಜೆಯನ್ನು ಮಾರ್ಚ್ 31ರ ಬದಲಿಗೆ ಮಾರ್ಚ್ 30ಕ್ಕೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಮಂಡಳಿಯ ಸೂಚನೆಯಂತೆ, ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ಪೂರ್ವನಿಗದಿತ ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿವೆ.
ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) ತಮ್ಮ ವ್ಯಾಪ್ತಿಯ ಜಿಲ್ಲಾ ಹಾಗೂ ತಾಲ್ಲೂಕು ಖಜಾನಾಧಿಕಾರಿಗಳಿಗೆ ಈ ಕುರಿತು ತಕ್ಷಣ ಮಾಹಿತಿ ನೀಡಿ, ತೃತೀಯ ಭಾಷೆ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಮಾರ್ಚ್ 31ರಂದು ಪಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದಲ್ಲದೆ, ಪ್ರಶ್ನೆಪತ್ರಿಕೆಯ ಪ್ಯಾಕೇಟ್ ಮೇಲ್ಭಾಗ ಹಾಗೂ ಪ್ರಶ್ನೆಪತ್ರಿಕೆಯಲ್ಲಿ ತೃತೀಯ ಭಾಷೆ ಪರೀಕ್ಷೆಯ ದಿನಾಂಕ ಮಾರ್ಚ್ 30 ಎಂದು ಮುದ್ರಿತವಾಗಿರುವುದರಿಂದ, ಪ್ರಶ್ನೆಪತ್ರಿಕೆ ವಿತರಿಸುವ ಸಂದರ್ಭದಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಸೇರಿದಂತೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರಿಗೆ ಈ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ.
ತೃತೀಯ ಭಾಷೆ ಪರೀಕ್ಷೆಯ ದಿನಾಂಕ ಬದಲಾವಣೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ವ್ಯಾಪಕವಾಗಿ ತಿಳಿಸುವಂತೆ ಸೂಚಿಸಲಾಗಿದೆ. ಜೊತೆಗೆ, ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿ, ಪರೀಕ್ಷೆಯ ದಿನಾಂಕ ಬದಲಾವಣೆಗೆ ಅನುಗುಣವಾಗಿ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ತಿಳಿಸಲಾಗಿದೆ.

