ಇದು ಸಾಮಾನ್ಯ ಚರ್ಚೆಯ ವಿಷಯವಲ್ಲ. ಇದು ಜೀವನದ ಒಳಹಂದರವನ್ನು ಸ್ಪರ್ಶಿಸುವ ಪ್ರಶ್ನೆ. ಆದರೂ, ಸಾಧ್ಯವಾದಷ್ಟು ಸರಳವಾಗಿ ಹೇಳುವುದಾದರೆˌ ಕಾಮˌ ಹಣ ಮತ್ತು ಅಧಿಕಾರವನ್ನು ಅರ್ಥಮಾಡಿಕೊಳ್ಳುವುದು ಬ್ರಹ್ಮಾಂಡದ ಶಕ್ತಿ ರಹಸ್ಯಗಳನ್ನೆ ಅರ್ಥಮಾಡಿಕೊಂಡಂತೆ.
ಆಧುನಿಕ ಜಗತ್ತಿನಲ್ಲಿ ಕಾಮವು ವಿಕೃತ ಶಕ್ತಿಯಾಗಿ ಪರಿವರ್ತಿತವಾಗಿದೆ. ಕಾಮದ ರಹಸ್ಯ ಸೃಜನತೆ. ಅದು ಇರುವುದು ನಿಸರ್ಗದ ವಿಸ್ತರಿಣತೆಗೆ. ಅದನ್ನು ಅತೀಯಾಗಿ ಬಳಸಿದಾಗ ವಿನಾಶ. ಅದನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶಿಸುವುದು “ತಂತ್ರ”. ಆಗ ಅದು ಸೃಜನಶೀಲ ಶಕ್ತಿ ಪಡೆದುಕೊಳ್ಳುತ್ತದೆ.
ಹಣವು ಕೇವಲ ವಿನಿಮಯದ ಸಾಧನವಲ್ಲ ˌ ಅದು ಒಂದು ಶಕ್ತಿ. ಅಧಿಕಾರವೂ ಕೇವಲ ಸ್ಥಾನಮಾನವಲ್ಲ; ಅದು ಮತ್ತೊಬ್ಬರ ಜೀವನದ ಮೇಲೆ, ಸಮಾಜದ ಮೇಲೆ ಪರಿಣಾಮ ಬೀರುವ ಶಕ್ತಿ. ಆದರೆ ಈ ಶಕ್ತಿಗಳ ಮೂಲವನ್ನು ನೋಡಿದಾಗ, ಅವು ಹೊರಗಿಲ್ಲ ˌ ಅವು ಮನುಷ್ಯನೊಳಗಿನ ಶಕ್ತಿಯ ವಿಸ್ತರಣೆ.
ಆಧ್ಯಾತ್ಮ ಪರಂಪರೆಯಲ್ಲಿ ಜೀವನವನ್ನು “ತಂತ್ರ–ಯಂತ್ರ–ಮಂತ್ರ” ಮತ್ತು “ಸೃಷ್ಟಿ – ಸ್ಥಿತಿ – ಲಯ” ಎಂಬ ಮೂರು ಆಯಾಮಗಳಲ್ಲಿ ನೋಡಲಾಗಿದೆ. ಈ ದೃಷ್ಟಿಕೋನದಿಂದ ನೋಡಿದಾಗ, ಮಾನವ ದೇಹವೇ ಒಂದು ತಂತ್ರ. ಇದು ಕೇವಲ ಮಾಂಸದ ಗುಡ್ಡವಲ್ಲ; ಮನಸ್ಸು, ಭಾವನೆ, ಪ್ರೇರಣೆ, ಚೈತನ್ಯ — ಇವೆಲ್ಲ ಸೇರಿ ನಿರ್ಮಿತವಾದ ಒಂದು ಸೂಕ್ಷ್ಮ ವ್ಯವಸ್ಥೆ. ಪಂಚ ಮಹಾಭೂತಗಳಿಂದ ನಿರ್ಮಿತವಾದ ಈ ದೇಹದಲ್ಲಿ ಅನೇಕ ಶಕ್ತಿಗಳು ರಹಸ್ಯವಾಗಿ ಅಡಗಿವೆ. ಅವುಗಳನ್ನು ಅರಿತು ಜಾಗೃತಿಗೊಳಿಸುವ ವಿದ್ಯೆಯೆ ತಂತ್ರ.
ಸಾಮಾನ್ಯ ಮನುಷ್ಯನಲ್ಲಿ ಈ ಶಕ್ತಿ ಸಹಜವಾಗಿ ಕೆಳಮುಖವಾಗಿ ಹರಿಯುತ್ತದೆ. ಅದು ಬದುಕಿನ ಮೂಲಭೂತ ಪ್ರಕ್ರಿಯೆ. ಆದರೆ ಸಾಧಕನು, ಯೋಗಿಯು, ಈ ಶಕ್ತಿಯ ದಿಕ್ಕನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ. ಅವನು ಶಕ್ತಿಯನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸುತ್ತಾನೆ. ಇದೇ ಯೋಗದ ಸಾರ.
ಇಲ್ಲಿ “ಯಂತ್ರ” ಪ್ರಸ್ತುತವಾಗುತ್ತದೆ. ಯಂತ್ರವೆಂದರೆ ಹೊರಗಿನ ಸಾಧನಗಳು — ಹಣ, ತಂತ್ರಜ್ಞಾನ, ಅಧಿಕಾರ, ವ್ಯವಸ್ಥೆಗಳು. ಇಂದಿನ ಯುಗದಲ್ಲಿ ಹಣವೇ ಅತ್ಯಂತ ಪ್ರಭಾವಿ ಯಂತ್ರ. ಈ ಯಂತ್ರದ ಮೂಲಕ ಮನುಷ್ಯ ತನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಾನೆ.
ಆದರೆ ಸಮಸ್ಯೆ ಇಲ್ಲಿ ಆರಂಭವಾಗುತ್ತದೆ. ಮನುಷ್ಯ ತಂತ್ರವನ್ನು ಮರೆತು, ಯಂತ್ರದ ಮೇಲೆ ಅವಲಂಬಿತನಾಗುತ್ತಾನೆ. ಒಳಗಿನ ಅಸ್ಥಿರತೆಯನ್ನು ಹೊರಗಿನ ಸಾಧನಗಳಿಂದ ಸಮತೋಲನಗೊಳಿಸಲು ಯತ್ನಿಸುತ್ತಾನೆ. ಇದರಿಂದ ಅವನ ಜೀವನದಲ್ಲಿ ಅಸಮತೋಲನ ಹುಟ್ಟುತ್ತದೆ.
ಉದಾರಣೆಗೆ: ಕಾರು ಎಂಬುವುದು ಯಂತ್ರ. ಆ ಯಂತ್ರವನ್ನು ಹೇಗಾದ್ರೂ ಬಳಸಬಹುದು. ನೀನು ಅದನ್ನು ಜೂಜಾಡಲು ಒಯ್ಯಬಹುದು ಅಥವಾ ಅದರಲ್ಲಿ ಹಿಮಾಲಯಕ್ಕೆಯಾದ್ರು ಹೋಗಬಹುದು. ಹಣವು ಒಂದು ಶಕ್ತಿ. ಅದನ್ನು ನೀನು ಹೇಗೆ ಬಳಸುವೆ? ಯಂತ್ರಗಳಿರುವುದು ನಿನ್ನೊಳಗಿನ ಅಪಾರ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಾಧನಗಳು. ಆದರೆ ಆ ಯಂತ್ರಗಳು ಬಳಕೆಯಾಗುತ್ತಿರುವುದು ವಿನಾಶಕಾರಿಯಾಗಿ.
ತಂತ್ರ – ಸೃಷ್ಟಿ
ಯಂತ್ರ – ಸ್ಥಿತಿ
ಮಂತ್ರ – ಲಯ
ತಂತ್ರ – ಕಾಮದ ಶಕ್ತಿಯನ್ನು ಸೃಜನಶೀಲತೆ ಪರಿವರ್ತಿಸುವುದನ್ನು ತಿಳಿಯುವ ವಿದ್ಯೆ
ಯಂತ್ರ – ಸಾಧನೆಗೆ ಸರಿಯಾಗಿ ಬಳಕೆ ಮಾಡುವ ಸಾಧನ.
ಮಂತ್ರ – ಲಯ ವೆಂದರೆ ಮನಸ್ಸು ಶಾಂತ ಸ್ಥಿತಿಯಲ್ಲಿ ಇಟ್ಟುಕೊಂಡು ಬ್ರಹ್ಮಾಂಡದ ವಿಶ್ವಶಕ್ತಿಯೊಂದಿಗೆ ವಿಲಿನವಾಗಿಸುವುದು.
ತಂತ್ರ ಮತ್ತು ಯಂತ್ರದ ನಡುವೆ ಸೇತುವೆಯಾದದ್ದು “ಮಂತ್ರ”. ಮಂತ್ರವೆಂದರೆ ಇಲ್ಲಿ ಜಪವಲ್ಲ, ಶಬ್ದವಲ್ಲ — ಅದು ಅರಿವು. ನಿಸರ್ಗದ ರಹಸ್ಯ ಮರ್ಮವನ್ನು ಅರಿಯುವ ಜ್ಞಾನ. ತಂತ್ರವನ್ನು ತಿಳಿದು, ಯಂತ್ರವನ್ನು ಸರಿಯಾಗಿ ಬಳಸುವ ಬುದ್ಧಿ.
ಶಕ್ತಿಯ ಬಗ್ಗೆ ಒಂದು ಮಹತ್ವದ ನಿಯಮವಿದೆ: ಸಂಗ್ರಹಿತ ಶಕ್ತಿ ಒಂದು ದಿನ ಹೊರಹರಿಯಲೇಬೇಕು. ಹಣ ಸಂಗ್ರಹವಾಗುತ್ತದೆ — ಅದು ಶಕ್ತಿಯಾಗುತ್ತದೆ. ಅಧಿಕಾರ ಸಂಗ್ರಹವಾಗುತ್ತದೆ — ಅದು ಪ್ರಭಾವವಾಗುತ್ತದೆ. ಆದರೆ ಈ ಶಕ್ತಿ ಜಾಗೃತಿಯಿಲ್ಲದೆ ಸಂಗ್ರಹವಾದರೆ, ಅದು ಕೆಳಮಟ್ಟಕ್ಕೆ ಹರಿಯುತ್ತದೆ. ಅತ್ಯಾಚಾರˌ ಲಾಲಸೆ, ಹಿಂಸೆ, ಆಧಿಪತ್ಯ — ಇಂದು ನಾವು ನೋಡುತ್ತಿರುವುದು ಶಕ್ತಿ ಈ ವಿಕೃತ ರೂಪಗಳು.
“Power reveals who you really are.” ಅಧಿಕಾರ ನಿನ್ನನ್ನು ಬದಲಾಯಿಸುವುದಿಲ್ಲ; ಅದು ನಿನ್ನೊಳಗಿನ ಅಂಶಗಳನ್ನು ವಿಸ್ತರಿಸುತ್ತದೆ.
ಹಣ ಮತ್ತು ಅಧಿಕಾರ ನಿನ್ನ ಚೈತನ್ಯದ ಮಟ್ಟವನ್ನು ಪರೀಕ್ಷಿಸುವ ಸಾಧನಗಳು.
ಇತಿಹಾಸ ಇದಕ್ಕೆ ಸಾಕ್ಷಿ. ಹಿಟ್ಲರ್ ಅಧಿಕಾರ ಮತ್ತು ಅಹಂಕಾರದ ಅತಿರೇಕದಿಂದ ವಿನಾಶದ ಸಂಕೇತವಾಯಿತು. ಅದೇ ವೇಳೆ ಗೌತಮ ಬುದ್ದನಿಗೆ ಎಲ್ಲಾ ಸಾಧನಗಳ ನಡುವೆಯೂ ಜಾಗೃತಿಯನ್ನು ಆರಿಸಿಕೊಂಡು, ಶಾಂತಿಯ ದಾರಿಯನ್ನು ತೋರಿಸಿದರು. ಶಕ್ತಿ ಒಂದೇ — ದಿಕ್ಕು ಮಾತ್ರ ಬದಲಾಗುತ್ತದೆ.
ಇಂದಿನ ಜಗತ್ತಿನಲ್ಲಿ ಹಣ ಮತ್ತು ಅಧಿಕಾರ ಹೆಚ್ಚಾಗುತ್ತಿದ್ದಂತೆ, ಅತೃಪ್ತಿಯೂ ಹೆಚ್ಚುತ್ತಿದೆ. ಇದು ಆರ್ಥಿಕ ಸಮಸ್ಯೆಯಲ್ಲ; ಇದು ಒಳಗಿನ ಖಾಲಿತನ. ಒಳಗೆ ಖಾಲಿಯಾಗಿದ್ದರೆ, ಹೊರಗಿನ ಯಾವುದೂ ಅದನ್ನು ತುಂಬಲಾರದು.
ಹೀಗಾಗಿ ಪ್ರಶ್ನೆ ಹಣದ ಬಗ್ಗೆ ಅಲ್ಲ, ಅಧಿಕಾರದ ಬಗ್ಗೆ ಅಲ್ಲ — ನಿನ್ನ ಜಾಗೃತಿಯ ಬಗ್ಗೆ. ಯಂತ್ರವನ್ನು ಹೇಗೆ ಬಳಸಬೇಕು ಎಂಬುದು ತಂತ್ರ ತಿಳಿದವನೆಗೆ ಮಾತ್ರ ಗೊತ್ತು. ಇಲ್ಲವಾದರೆ ಯಂತ್ರವೇ ಮನುಷ್ಯನನ್ನು ನಿಯಂತ್ರಿಸಲು ಆರಂಭಿಸುತ್ತದೆ.
ಧ್ಯಾನ ಇಲ್ಲಿ ಮುಖ್ಯವಾಗುತ್ತದೆ. ಅದು ನಿಯಂತ್ರಣವಲ್ಲ; ಅದು ಸ್ಪಷ್ಟತೆ. ಅದು ದಮನವಲ್ಲ; ಅದು ಅರಿವು. ಧ್ಯಾನವು ತಂತ್ರವನ್ನು ಅರಿಯಲು, ಯಂತ್ರವನ್ನು ಸಮತೋಲನಗೊಳಿಸಲು, ಮಂತ್ರದತ್ತ ಸಾಗಲು ಸಹಾಯ ಮಾಡುತ್ತದೆ.
ಕೊನೆಗೆ, ಹಣ ಮತ್ತು ಅಧಿಕಾರ ಶಾಪವಲ್ಲ. ಅವು ನಿಸರ್ಗದ ಶಕ್ತಿಗಳು. ಆದರೆ ಜಾಗೃತಿಯಿಲ್ಲದ ಶಕ್ತಿ ವಿನಾಶಕ್ಕೆ ದಾರಿ ಮಾಡುತ್ತದೆ; ಜಾಗೃತಿಯೊಂದಿಗೆ ಇರುವ ಶಕ್ತಿ ಪರಿವರ್ತನೆಗೆ ದಾರಿ ಮಾಡುತ್ತದೆ.
ನಿಸರ್ಗ ಎಲ್ಲರಿಗೂ ಈ ಪರೀಕ್ಷೆಯನ್ನು ನೀಡುವುದಿಲ್ಲ. ಆದರೆ ಯಾರಿಗೆ ನೀಡುತ್ತದೋ, ಅವರ ಮುಂದೆ ಎರಡು ದಾರಿಗಳು ತೆರೆದಿರುತ್ತವೆ — ಜಾಗೃತಿಯ ದಾರಿ, ಅಥವಾ ಅಜ್ಞಾನದ ದಾರಿ.
ಆಯ್ಕೆ ಯಾವಾಗಲೂ ಮನುಷ್ಯನದೇ.
ಆದರೆ ಒಂದು ಪ್ರಶ್ನೆ ಮೌನವಾಗಿ ಉಳಿಯುತ್ತದೆ:
ನೀನು ಹಣ ಮತ್ತು ಅಧಿಕಾರವನ್ನು ಬಳಸುತ್ತಿದ್ದೀಯಾ…
ಅಥವಾ ಅವೇ ನಿನ್ನನ್ನು ಬಳಸುತ್ತಿವೆಯಾ?
ಅಜಾಗೃತಿಯಿಂದ ಸಂಗ್ರಹಿತ ಅತೀ ಹಣ ಮತ್ತು ಅಧಿಕಾರ ಮನುಷ್ಯನನ್ನೆ ಕಬಳಿಸುತ್ತಿವೆ…ಮನುಷ್ಯ ನಿರ್ಮಿತ ಯಂತ್ರಗಳೆ ಮನುಷ್ಯನ ವಿನಾಶಕ್ಕೆ ಕಾರಣವಾಗುತ್ತೀವೆ.
✍️*ಜಯದೇವ ಪೂಜಾರ*
7676870233
