ಈ ಗುಣತ್ರಯಗಳು ಹೇಗೆ ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಮ್ಮನ್ನು ಕುಣಿಸುತ್ತವೆ ಅನ್ನುವುದನ್ನು ಕೃಷ್ಣ ನಿರೂಪಿಸಿದ್ದನ್ನು ನೋಡಿದೆವು. ಇಲ್ಲಿ ನಮಗೆ ಒಂದು ಸಂಶಯ ಬರಬಹುದು. ಈ ಮೂರು ಗುಣಗಳು ಒಟ್ಟಿಗೆ ಏಕಕಾಲದಲ್ಲಿ ಕೆಲಸ ಮಾಡುವಾಗ, ಕೇವಲ ಸಾತ್ವಿಕ ಚಿಂತನೆ, ಕೇವಲ ರಾಜಸ ಚಿಂತನೆ, ಕೇವಲ ತಾಮಸ ಚಿಂತನೆ ಹೇಗೆ ಸಾಧ್ಯವಾಗುತ್ತದೆ? ಮೂರು ಗುಣಗಳು ಒಬ್ಬನ ದೇಹದಲ್ಲಿರುವಾಗ ಯಾವುದೋ ಒಂದು ಗುಣ ಕೆಲಸ ಮಾಡುವುದು ಹೇಗೆ ಸಾಧ್ಯ? ಮೂರು ಗುಣಗಳು ಬೆರೆತು ನಮ್ಮೊಳಗಿರುವಾಗ ಒಂದು ಪ್ರತ್ಯೇಕವಾದ ಸಾತ್ವಿಕ ಸ್ವಭಾವ, ರಾಜಸ ಸ್ವಭಾವ, ತಾಮಸ ಸ್ವಭಾವ ಎಂದು ಗುರುತಿಸುವುದು ಹೇಗೆ? ಇದರ ವಿವರಣೆ ಮುಂದಿನ ಶ್ಲೋಕ
ಶ್ಲೋಕ – 10
ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥೧೦॥
ರಜಃ ತಮಃ ಚ ಅಭಿಭೂಯ ಸತ್ತ್ವಮ್ ಭವತಿ ಭಾರತ ।
ರಜಃ ಸತ್ತ್ವಮ್ ತಮಃ ಚ ಏವ ತಮಃ ಸತ್ತ್ವಮ್ ರಜಃ ತಥಾ –ಭಾರತ, ರಜಸ್ಸು-ತಮಸ್ಸುಗಳನ್ನು ತಳ್ಳಿ ಸತ್ವಗುಣ ಬಲಗೊಳ್ಳುತ್ತದೆ; ಸತ್ವ ತಮಸ್ಸುಗಳನ್ನು ತಳ್ಳಿ ರಜೋಗುಣ; ಹಾಗೆಯೇ ಸತ್ವ-ರಜಸ್ಸುಗಳನ್ನು ತಳ್ಳಿ ತಮೋಗುಣ.
ಗುಣತ್ರಯಗಳಿಗೆ ಒಂದು ವಿಶೇಷವಾದ ಶಕ್ತಿ ಇದೆ. ಏನೆಂದರೆ ಈ ಮೂರರಲ್ಲಿ ಯಾವುದೋ ಒಂದು ನಮ್ಮ ಮನಸ್ಸಿನ ನಿಯಂತ್ರಣವನ್ನು ತೆಗೆದುಕೊಂಡು ಉಳಿದ ಎರಡು ಗುಣಗಳನ್ನು ಮುಚ್ಚಿ(Suppress)ಬಿಡುತ್ತದೆ. ಮೂರರಲ್ಲಿ ಒಂದು ಗುಣ ನಮ್ಮ ಮನಸ್ಸನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಆಗ ನಮ್ಮ ಮನಸ್ಸು ಆ ಗುಣಕ್ಕೆ ತಕ್ಕಂತೆ ಕೆಲಸ ಮಾಡಲಾರಂಭಿಸುತ್ತದೆ. ತ್ರಿಗುಣಮಾನಿನಿ ಲಕ್ಷ್ಮಿ. ಆಕೆ ಯಾವುದೋ ಒಂದು ಗುಣಕ್ಕೆ ಉಳಿದ ಎರಡು ಗುಣವನ್ನು ಮೀರಿಸಿ ಕೆಲಸ ಮಾಡುವ ಶಕ್ತಿ ಕೊಡುತ್ತಾಳೆ. ಹೀಗೆ ಒಂದು ಗುಣ ಉಳಿದೆರಡನ್ನು ಮುಚ್ಚಿ ಕೆಲಸ ಮಾಡಲಾರಂಭಿಸುತ್ತದೆ.
ನಮ್ಮಲ್ಲಿ ಯಾವ ಗುಣ ಜಾಗೃತವಾಗಿದೆ ಎಂದು ನಾವು ಗುರುತಿಸಿಕೊಳ್ಳಬೇಕು. ಆಗ ಆ ಗುಣದ ಪ್ರಭಾವದಿಂದಾಗುವ ಅನಾಹುತವನ್ನು ತಪ್ಪಿಸಬಹುದು. ಇದನ್ನು ಗುರುತಿಸುವ ವಿಧಾನವನ್ನು ಕೃಷ್ಣ ಮುಂದಿನ ಮೂರು ಶ್ಲೋಕಗಳಲ್ಲಿ ವಿವರಿಸುತ್ತಾನೆ.
