ಇಡೀ ಜಗತ್ತಿಗೆ ತಲ್ಲಣಗೊಳಿಸಿದ್ದ ಸಾಂಕ್ರಾಮಿಕ ಕೊರನಾ ಸೋಂಕು(corona virus) ಇದೀಗ ಮತ್ತೆ ಉಲ್ಬಣಿಸಿದೆ. ಜಗತ್ತು ಕೊರೊನಾ ದಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಸದ್ದಿಲ್ಲದೆ ಹರಡುತ್ತಿರುವ ‘ಸಿಕಾಡಾ’ (Cicada) ಎಂಬ ಹೊಸ ರೂಪಾಂತರಿ ವೈರಸ್ ಈಗ ಆತಂಕಕ್ಕೆ ಕಾರಣವಾಗಿದೆ.
ವೈಜ್ಞಾನಿಕವಾಗಿ BA.3.2 ಎಂದು ಕರೆಯಲ್ಪಡುವ ಈ ರೂಪಾಂತರಿಯು ಈಗಾಗಲೇ ಬ್ರಿಟನ್ ಸೇರಿದಂತೆ ವಿಶ್ವದ 23 ದೇಶಗಳಲ್ಲಿ ಪತ್ತೆಯಾಗಿದ್ದು, ವೈದ್ಯರು ಇದರ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಏನಿದು ಸಿಕಾಡಾ ರೂಪಾಂತರಿ?
ಇದಕ್ಕೆ ‘ಸಿಕಾಡಾ’ ಎಂಬ ಹೆಸರು ಬರಲು ಒಂದು ಕಾರಣವಿದೆ. ಸಿಕಾಡಾ ಎಂಬ ಕೀಟವು ದೀರ್ಘಕಾಲದವರೆಗೆ ಮಣ್ಣಿನ ಅಡಿಯಲ್ಲಿ ಸುಪ್ತವಾಗಿದ್ದು, ನಂತರ ದಿಢೀರನೆ ಹೊರಬರುತ್ತದೆ. ಅದೇ ರೀತಿ, ಈ ವೈರಸ್ 2024ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಸುಮಾರು ಒಂದು ವರ್ಷದ ಕಾಲ ಎಲ್ಲಿಯೂ ಕಾಣಿಸಿಕೊಳ್ಳದೆ ಸುಪ್ತವಾಗಿದ್ದ ಈ ವೈರಸ್, ಸೆಪ್ಟೆಂಬರ್ 2025ರಿಂದ ಏಕಾಏಕಿ ವಿವಿಧ ದೇಶಗಳಲ್ಲಿ ಹರಡಲು ಆರಂಭಿಸಿದೆ. ಇದು ಒಮಿಕ್ರಾನ್ ತಳಿಯ ವಂಶವಾಹಿಯಾಗಿದ್ದು, ಸುಮಾರು 75ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿರುವುದು ವಿಜ್ಞಾನಿಗಳನ್ನು ಚಿಂತೆಗೀಡು ಮಾಡಿದೆ.
ಸದ್ಯ ಉತ್ತರ ಯುರೋಪ್ ದೇಶಗಳಾದ ಡೆನ್ಮಾರ್ಕ್, ಜರ್ಮನಿ ಮತ್ತು ನೆದರ್ಲೆಂಡ್ಸ್ನಲ್ಲಿ ಈ ವೈರಸ್ ಅತಿ ಹೆಚ್ಚು ಸಕ್ರಿಯವಾಗಿದೆ. ಅಲ್ಲಿನ ಒಟ್ಟು ಪ್ರಕರಣಗಳಲ್ಲಿ ಶೇ.30ರಷ್ಟು ಈ ‘ಸಿಕಾಡಾ’ ರೂಪಾಂತರಿಯೇ ಆಗಿದೆ. ಬ್ರಿಟನ್ನ ಆರೋಗ್ಯ ಸಂಸ್ಥೆಯು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಇದು ಹಳೆಯ ಲಸಿಕೆಗಳು ಮತ್ತು ಹಿಂದಿನ ಸೋಂಕಿನಿಂದ ಬಂದ ರೋಗನಿರೋಧಕ ಶಕ್ತಿಯನ್ನು ಮೀರಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ. ಆದಾಗ್ಯೂ, ಈ ವೈರಸ್ ಹಿಂದಿನ ತಳಿಗಳಿಗಿಂತ ಹೆಚ್ಚು ಅಪಾಯಕಾರಿ ಅಥವಾ ಹೆಚ್ಚಿನ ಸಾವು-ನೋವುಗಳಿಗೆ ಕಾರಣವಾಗುತ್ತದೆ ಎಂದು ಸದ್ಯಕ್ಕೆ ವೈದ್ಯರು ಸ್ಪಷ್ಟಪಡಿಸಿಲ್ಲ.
ಸಿಕಾಡಾ ಲಕ್ಷಣಗಳು ಏನು?
ಸಿಕಾಡಾ ರೂಪಾಂತರಿಯ ಲಕ್ಷಣಗಳು ಒಮಿಕ್ರಾನ್ನಂತೆಯೇ ಇದ್ದರೂ, ಕೆಲವು ಬದಲಾವಣೆಗಳು ಕಂಡುಬಂದಿವೆ:
ತೀವ್ರ ಗಂಟಲು ನೋವು ಈ ತಳಿಯ ಪ್ರಮುಖ ಲಕ್ಷಣವಾಗಿದೆ.
ಸಾಮಾನ್ಯ ಲಕ್ಷಣಗಳು: ಜ್ವರ, ಚಳಿ, ಸತತ ಕೆಮ್ಮು, ವಿಪರೀತ ಸುಸ್ತು ಮತ್ತು ಮೂಗು ಕಟ್ಟುವುದು ಸಾಮಾನ್ಯ.
ಜೀರ್ಣಕ್ರಿಯೆ ಸಮಸ್ಯೆ: ಕೆಲವು ರೋಗಿಗಳಲ್ಲಿ ವಾಕರಿಕೆ, ವಾಂತಿ ಅಥವಾ ಭೇದಿಯಂತಹ ಸಮಸ್ಯೆಗಳು ಇತರೆ ತಳಿಗಳಿಗಿಂತ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತಿವೆ.
