ತುಮಕೂರು: ಸರಕಾರ ಮಾಡದ ಉತ್ತಮ ಕಾರ್ಯಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಮಾಡುತ್ತಿರುವುದು ಶ್ಲಾಘನೀಯ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ವೀರಬಸವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ದೇವಲಾಪುರ ಗ್ರಾಪಂ ವ್ಯಾಪ್ತಿಯ ಬಿಟ್ಟನಕುರಿಕೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಗ್ರಾಮಾಂತರ, ದೇವಲಾಪುರ ಗ್ರಾಪಂ, ಬಿಟ್ಟನಕುರಿಕೆ ಕೆರೆ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 926ನೇ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಕೆರೆಗೆ ನೀರು ಸರಾಗವಾಗಿ ಹರಿದು ಸಂಗ್ರಹವಾಗುವಂತೆ ಮಾಡಿದ್ದಾರೆ. ಇದರಿಂದ ರೈತರಿಗೆ, ಸುತ್ತಮುತ್ತಲ ಗ್ರಾಮಸ್ಥರಿಗೆ ಬಹಳ ಅನುಕೂಲವಾಗುತ್ತದೆ. ಹೆಚ್ಚಿನ ನೀರು ಸಂಗ್ರಹವಾಗುವುದರಿಂದ ಜನ-ಜಾನುವಾರುಗಳಿಗೆ ನೆರವಾಗುತ್ತದೆ. ಇಂತಹ ಅನೇಕ ರೀತಿಯ ಉತ್ತಮ ಕಾರ್ಯಗಳನ್ನು ನೆರವೇರಿಸುತ್ತಿರುವ ಧರ್ಮಸ್ಥಳದ ಕಾರ್ಯ ಪ್ರಶಂಸನೀಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಸೀನಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮದ್ಯವರ್ಜನ ಶಿಬಿರ, ಮಾಸಾಶನ, ವಾತ್ಸಲ್ಯ ಯೋಜನೆ, ದೇವಸ್ಥಾನ ಅಭಿವೃದ್ಧಿ ಸೇರಿದಂತೆ ಹಲವು ಉತ್ತಮ ಕಾರ್ಯಗಳು ಬಡವರ ಪಾಲಿಗೆ ದಾರಿ ದೀಪವಾಗಿವೆ. ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಕೆರೆ ಹೂಳು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ ಬಿಟ್ಟನಕುರಿಕೆ ಆಂಜನೇಯ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಧರ್ಮಸ್ಥಳದ ವತಿಯಿಂದ 1.50 ಲಕ್ಷ ಸಹಾಯಧನದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಮರಾಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಮಾಜಿ ಜಿಪಂ ಸದಸ್ಯ ಲಕ್ಷ್ಮೀ ನರಸೇಗೌಡ, ಮಾಜಿ ಗ್ರಾಪಂ ಸದಸ್ಯ ವಿಜಯ್ ಕುಮಾರ್ ಮಾತನಾಡಿದರು.
ಸಮಾರಂಭದಲ್ಲಿ ಪತ್ರಕರ್ತ ರಂಗನಾಥ ಕೆ. ಹೊನ್ನಮರಡಿ, ಕ್ಷೇತ್ರ ಯೋಜನಾಧಿಕಾರಿ ಪಿ.ಬಿ.ಸಂದೇಶ್, ಪಿಡಿಒ ಮಂಜಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಮಾಜಿ ತಾಪಂ ಸದಸ್ಯ ಮಂಜುನಾಥ್, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಇಂಜಿನಿಯರ್ ಭರತ್, ಮಾಜಿ ಗ್ರಾಪಂ ಸದಸ್ಯೆ ಶಬೀನಾ ಇಬ್ರಾಹಿಂ, ಕೃಷಿ ಮೇಲ್ವಿಚಾರಕ ರಾಘವೇಂದ್ರ, ವಲಯ ಮೇಲ್ವಿಚಾರಕ ಹೇಮಂತ್ ಕುಮಾರ್, ಸೇವಾಪ್ರತಿನಿಧಿ ಮಂಜಮ್ಮ, ಜಯಲಕ್ಷ್ಮಿ, ಗ್ರಾಮದ ಮುಖಂಡ ಪದ್ಮರಾಜ್, ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು, ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
