ತುಮಕೂರು- ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಸಿದ್ಧಗಂಗಾ ಮಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಡಾ.ಶ್ರೀಶ್ರೀ ಶಿವಕುಮಾರಸ್ವಾಮೀಜಿಗಳ 119ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವವನ್ನು ಶ್ರೀ ಸಿದ್ಧಗಂಗಾಮಠದಲ್ಲಿ ಆಯೋಜಿಸಲಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.
ಸಿದ್ಧಗಂಗಾ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ನಡೆಯಲಿದ್ದು,ಮುಖ್ಯಅತಿಥಿಗಳಾಗಿ ರಾಷ್ಟಪತಿ ಶ್ರೀಮತಿದ್ರೌಪದಿಮುರ್ಮ ಅವರು ಆಗಮಿಸಿ ಗುರುವಂದನಾ ಮಹೋತ್ಸವವನ್ನು ಉದ್ಘಾಟಿಸುವರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಗೌರವತಿಥಿಗಳಾಗಿ ಆಗಮಿಸುತ್ತಿದ್ದಾರೆ, ಮೈಸೂರಿನ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು,ದಿವ್ಯನೇತೃತ್ವವನ್ನು ಶ್ರೀ ಸಿದ್ಧಲಿಂಗಸ್ವಾಮೀಜಿಗಳು,ದಿವ್ಯ ಉಪಸ್ಥಿತಿಯನ್ನು ಶ್ರೀ ಶಿವಸಿದ್ದೇಶ್ವರಸ್ವಾಮೀಜಿಗಳು ವಹಿಸಲಿದ್ದಾರೆ ಎಂದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ, ರಾಜ್ಯದ ಸಚಿವರುಗಳಾದ ಡಾ. ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡ,ಟಿ.ಬಿ.ಜಯಚಂದ್ರ, ಕೆ.ಎನ್.ರಾಜಣ್ಣ ಆಗಮಿಸಲಿದ್ದಾರೆ ಎಂದರು.
ಪ್ರತಿ ವರ್ಷದಂತೆ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ಗದ್ದುಗೆಗೆ ಅಭಿಷೇಕ,ವಿವಿಧ ಪೂಜೆಗಳು ನಡೆಯುವುದು, ಬೆಳಿಗ್ಗೆ 8 ಗಂಟೆಗೆ ಶ್ರೀಗಳ ಪುತ್ಥಲಿ ಮೆರವಣಿಗೆ ಶ್ರೀಮಠದ ಆವರಣದಲ್ಲಿ ನಡೆಯಲಿದೆ. 119 ಮಹಿಳೆಯರಿಂದ ವಚನಗಾಯನ ನಡೆಯಲಿದೆ,ವೀಣಾವಾದನ ಸಹ ನಡೆಯಲಿದೆ,ಬೆಳಗಿನಿಂದ ರಾತ್ರಿವರೆಗೆ ಸುಮಾರು 1 ಲಕ್ಷ ಭಕ್ತಾಧಿಗಳಿಗೆ ದಾಸೋಹ ನಡೆಯಲಿದೆ ಎಂದರು.
ರಾಷ್ಟçಪತಿಗಳ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ದೃಷ್ಠಿಯಿಂದ ಗಣ್ಯ ಮಾನ್ಯರು ಭಕ್ತರು ಆದಷ್ಟು ಬೇಗ ಬಂದು 10-30ರ ಒಳಗಾಗಿ ಬಂದು ನಿಗಧಿತ ಸ್ಥಳದಲ್ಲಿ ಆಸಿನರಾಗಬೇಕೆಂದು ಕೋರಿದ ಸ್ವಾಮೀಜಿಯವರು ಭಕ್ತರಿಗೆ ಪರ್ಯಾಯ ಮಾರ್ಗ ಮಾಡಲಾಗಿದ್ದು, ಶ್ರೀ ಮಠದ ಮುಖ್ಯ ದ್ವಾರದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭಕ್ತರು ಆಗಮಿಸಲು ರೈಲು ನಿಲ್ದಾಣ, ಕ್ಯಾತ್ಸಂದ್ರ ಬಸ್ನಿಲ್ದಾಣ ಕಡೆಯಿಂದ ರೈಲ್ವೆ ಕೆಳ ಸೇತುವೆ ಮಾರ್ಗವನ್ನು ಬಳಸಬೇಕಿದ್ದು ಐದು ಮಿನಿಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಜಂಟಿಕಾರ್ಯದರ್ಶಿ ಡಾ||ಬಿ.ಶಿವಕುಮಾರಯ್ಯ, ಆಡಳಿತಾಧಿಕಾರಿ ಕೆ.ಎಸ್.ವಿಶ್ವನಾಥಯ್ಯ, ಸಿಇಓ ಜಯವಿಭವಸ್ವಾಮಿ, ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ವರದಿ : ಕೆ ಬಿ ಚಂದ್ರಚೂಡ್
