ರಾಮನಾಥಪುರ, ಮಾ.31: ಕಲಿಯುಗ ಬಸವಣ್ಣ, ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳೆಂದೇ ಖ್ಯಾತರಾದ ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ತತ್ವ-ಆದರ್ಶಗಳು ಹಾಗೂ ಅವರ ಸರಳ ಜೀವನಶೈಲಿಯನ್ನು ನಾವು ಎಲ್ಲರೂ ಅಳವಡಿಸಿಕೊಂಡು ಸಾಗಬೇಕು ಎಂದು ಶ್ರೀ ಸಿದ್ದಗಂಗಾ ಫೈನಾನ್ಸ್ ಅಧ್ಯಕ್ಷ ಬಿ.ಆರ್. ಮಧುಕರ್ ಹೇಳಿದರು.
ರಾಮನಾಥಪುರ ಹೋಬಳಿಯ ಬಸವಪಟ್ಟಣದಲ್ಲಿರುವ ಶ್ರೀ ಸಿದ್ದಗಂಗಾ ಫೈನಾನ್ಸ್ ಕಚೇರಿ ಆವರಣದಲ್ಲಿ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪೂಜೆ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದಗಂಗಾ ಮಠವು 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಹಾಗೂ ಜ್ಞಾನದಾಸೋಹವನ್ನು ನೀಡುವ ಮೂಲಕ ವಿಶ್ವಮಟ್ಟದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಗಳಿಸಿದೆ. ಇಂತಹ ಮಹಾನ್ ಮಠವನ್ನು ನಮ್ಮ ನಾಡು ಪಡೆದಿರುವುದು ನಮ್ಮೆಲ್ಲರ ಪುಣ್ಯ. ಶ್ರೀಗಳ ನಡೆ-ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ಮಾಡಿರುವ ಸತ್ಕಾರ್ಯಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ದುಷ್ಚಟಗಳು ಮತ್ತು ದುರಭ್ಯಾಸಗಳಿಂದ ದೂರವಿದ್ದು, ಬದುಕಿನಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಬೇಕು. ಸಿದ್ದಗಂಗಾ ಮಠವು ಶಿಕ್ಷಣದ ಮೂಲಕ ಜ್ಞಾನಾರ್ಜನೆಯ ಬೀಜ ಬಿತ್ತುತ್ತಿದ್ದು, ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಮಧುಕರ್ ಅಭಿಪ್ರಾಯಪಟ್ಟರು.
ಇಂದಿನ ಪೀಠಾಧಿಪತಿಗಳೂ ಸಹ ಸಿದ್ದಗಂಗಾ ಮಠದ ಭಕ್ತರ ಸಹಕಾರದೊಂದಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿಕೊಂಡು, ಮಠದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಗಂಗಾ ಫೈನಾನ್ಸ್ ಸದಸ್ಯರಾದ ಅಂಭರೀಶ್, ಎಂ.ಎನ್. ಕುಮಾರಸ್ವಾಮಿ, ಮನು, ಕೆಂಡಗಣ್ಣ, ವಿರೂಪಾಕ್ಷ, ಮಹದೇವ, ಕುಮಾರಸ್ವಾಮಿಗೌಡ, ಸಿದ್ದರಾಜು, ಪ್ರಕಾಶ್, ಎಂ.ಪಿ. ಚೇರನ ಮಧುಕರ್, ಸುಮ್ಮಖಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
