ನವದೆಹಲಿ, ಏ.1: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿರುವ ಹಿನ್ನೆಲೆಯಲ್ಲಿ, ಮಸೂದೆ ಇದೀಗ ಅಧಿಕೃತವಾಗಿ ಕಾಯ್ದೆಯಾಗಿದೆ ಎಂದು ಕೇಂದ್ರ ಕಾನೂನು ಸಚಿವಾಲಯದ ಗಝೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯೊಂದಿಗೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ಈ ತಿದ್ದುಪಡಿ ಮಸೂದೆಗೆ ಕಾನೂನುಬದ್ಧ ಮಾನ್ಯತೆ ದೊರೆತಿದ್ದು, ದೇಶದಾದ್ಯಂತ ಜಾರಿಗೆ ಬರಲಿದೆ.
ಇದಕ್ಕೂ ಮುನ್ನ, ಈ ಮಸೂದೆಗೆ ಸಹಿ ಹಾಕಬಾರದೆಂದು ಒತ್ತಾಯಿಸಿ ಸುಮಾರು 140ಕ್ಕೂ ಹೆಚ್ಚು ನ್ಯಾಯವಾದಿಗಳು ಹಾಗೂ ಸ್ತ್ರೀವಾದಿಗಳು ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು. ಮಸೂದೆಯಲ್ಲಿರುವ ಕೆಲವು ನಿಯಮಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಹಾಗೂ ಮಸೂದೆ ಅಂಗೀಕರಿಸಿದ ವಿಧಾನದಲ್ಲೂ ಲೋಪದೋಷಗಳಿವೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಮಸೂದೆ ಕುರಿತು ರಾಷ್ಟ್ರಪತಿಯವರ ಗಮನ ಸೆಳೆದ ಅವರು, ಅದರಲ್ಲಿನ ಕೆಲ ಪ್ರಾವಧಾನ್ಯಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ವಿಶೇಷವಾಗಿ, ಮಸೂದೆ ರೂಪುರೇಷೆ ಹಾಗೂ ಶಾಸನಾತ್ಮಕ ಪ್ರಕ್ರಿಯೆಯಲ್ಲಿ ಅಗತ್ಯವಾದ ಚರ್ಚೆ ಮತ್ತು ಪರಿಶೀಲನೆ ನಡೆದಿಲ್ಲ ಎಂಬ ಆರೋಪವನ್ನೂ ಮುಂದಿಟ್ಟಿದ್ದರು.
ಆದಾಗ್ಯೂ, ಈ ಎಲ್ಲ ಆಕ್ಷೇಪಣೆಗಳ ನಡುವೆಯೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗೆ ಸಹಿ ಹಾಕಿರುವುದರಿಂದ, ಇದೀಗ ಅದು ಕಾನೂನಾಗಿ ಜಾರಿಯಲ್ಲಿದೆ. ಈ ಬೆಳವಣಿಗೆ ದೇಶದಾದ್ಯಂತ ವಿವಿಧ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ.
