ಶ್ಲೋಕ – 39
ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಮ್ ॥೩೯॥
ಯತ್ ಚ ಅಪಿ ಸರ್ವ ಭೂತಾನಾಮ್ ಬೀಜಮ್ ತತ್ ಅಹಮ್ ಅರ್ಜುನ ।
ನ ತತ್ ಅಸ್ತಿ ವಿನಾ ಯತ್ ಸ್ಯಾತ್ ಮಯಾ ಭೂತಮ್ ಚರ ಅಚರಮ್ –ಅರ್ಜುನ, ಸಮಸ್ತ ಜೀವಿಗಳಲ್ಲಿ ಏನೆಲ್ಲ ವಿಶಿಷ್ಠ ಗುಣವಿದೆಯೊ ಅವುಗಳಲ್ಲಿ ನಾನೆ ಇದ್ದು ಆ ಶಕ್ತಿ ನೀಡಿದ್ದೇನೆ. ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ ತಾನಾಗಿ ಇಲ್ಲ.
“ಈ ಜಗತ್ತಿನಲ್ಲಿರುವ ಸಮಸ್ತ ವಸ್ತು(ಜಡ-ಚೇತನ)ವಿಗೂ ಮೂಲಭೂತವಾಗಿರುವ ಅಭಿವ್ಯಂಜಕ ರೂಪ ಮತ್ತು ಶಕ್ತಿ ಕೊಡುವವನು ನಾನು” ಎನ್ನುತ್ತಾನೆ ಕೃಷ್ಣ. ಹೀಗೆ ಭಗವಂತ ಸಮಸ್ತ ಸೃಷ್ಟಿಗೂ ಬೀಜಪುರುಷನಾಗಿ ನಿಂತಿದ್ದಾನೆ. ಕಣ್ಣಿಗೆ ಕಾಣದ ಜೀವಕ್ಕೆ ಕಣ್ಣಿಗೆ ಕಾಣುವ ಶರೀರ ಕೊಡುವವನು ಆತ. ಗಂಡಿನ ರೇತಸ್ಸಿನಲ್ಲಿದ್ದು, ಜೀವವನ್ನು ರೇತಸ್ಸಿನ ಮುಖೇನ ಹೆಣ್ಣಿನ ದೇಹದೊಳಗೆ ಸೇರಿಸಿ, ಅಲ್ಲಿ ಜೀವಕ್ಕೆ ಒಂದು ರೂಪವನ್ನು ಕೊಟ್ಟು ಬೆಳಗಿಸುವವ ಭಗವಂತ. ಹೀಗೆ ಈ ಪ್ರಪಂಚದಲ್ಲಿರುವ ಚೇತನಾಚೇತನ ಅಥವಾ ಚರಾಚರಾತ್ಮಕ-ಎಲ್ಲವನ್ನೂ ಹುಟ್ಟಿಸುವವನು ಭಗವಂತ. “ಈ ಪ್ರಪಂಚದಲ್ಲಿ ನನ್ನನ್ನು ತೊರೆದು ಸ್ವತಂತ್ರವಾಗಿ ಯಾವ ವಸ್ತುವೂ ಇಲ್ಲ” ಎನ್ನುತ್ತಾನೆ ಕೃಷ್ಣ. ಇದು ವೈದಿಕ ಪರಂಪರೆಯಲ್ಲಿ ಇರುವ ಗೊಂದಲಕ್ಕೆ ಕೃಷ್ಣ ಕೊಟ್ಟ ನೇರ ಉತ್ತರ. ಜೀವ ಮತ್ತು ಭಗವಂತ ಒಂದೇ ಅಲ್ಲ. ಜೀವ ಭಗವಂತನ ಪ್ರತಿಬಿಂಬ. ಎಲ್ಲವೂ ಇದೆ. ಆದರೆ ಭಗವಂತನನ್ನು ಬಿಟ್ಟು ಸ್ವತಂತ್ರ ಅಸ್ತಿತ್ವ ಯಾರಿಗೂ ಇಲ್ಲ.
