ಕರ್ನಾಟಕದ (Karnataka) ವಾಹನ ಮಾಲೀಕರು ಎದುರಿಸುತ್ತಿದ್ದ ದೀರ್ಘಕಾಲದ ಸಮಸ್ಯೆಯೊಂದಕ್ಕೆ ಈಗ ಅಧಿಕೃತವಾಗಿ ಪರಿಹಾರ ಸಿಕ್ಕಿದೆ. ಅದುವೇ, ರಾಜ್ಯದ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (Pollution Control Certificate) ಅರ್ಥಾತ್ ಪಿಯುಸಿಸಿ (PUCC) ಮಾಹಿತಿಯನ್ನು ಕೇಂದ್ರ ಸರ್ಕಾರದ (Central Government) ವಾಹನ್ (Vahan) ಪೋರ್ಟಲ್ನೊಂದಿಗೆ ಸಂಯೋಜಿಸಲು ಕರ್ನಾಟಕ ಮುಂದಾಗಿದ್ದು, ಈ ಮೂಲಕ ವಾಹನ ಸವಾರರು ಟ್ರಾಫಿಕ್ ಫೈನ್ನಲ್ಲಿ ಸಾವಿರಾರು ರೂಪಾಯಿಗಳವರೆಗೆ ಉಳಿಸಬಹುದಾಗಿದೆ.
ಆ ಕುರಿತ ವರದಿ ಇಲ್ಲಿದೆ.
ಹೌದು, ಇಲ್ಲಿಯವರೆಗೆ ಕರ್ನಾಟಕದ ವಾಹನಗಳು ಪಿಯುಸಿಸಿ ಪ್ರಮಾಣಪತ್ರವನ್ನು ಹೊಂದಿದ್ದರೂ ಸಹ ಅವುಗಳ ಮಾಹಿತಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್ನಲ್ಲಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಕರ್ನಾಟಕ ನೋಂದಣಿಯ ವಾಹನಗಳು ಮಹಾರಾಷ್ಟ್ರ, ಗೋವಾ, ಕೇರಳ ಅಥವಾ ತಮಿಳುನಾಡಿನಂತಹ ರಾಜ್ಯಗಳಿಗೆ ಹೋದಾಗ ಅಲ್ಲಿನ ಟ್ರಾಫಿಕ್ ಪೊಲೀಸರು ಆನ್ಲೈನ್ನಲ್ಲಿ ಮಾಹಿತಿಯನ್ನು ಪರಿಶೀಲಿಸಿ, ಅಲ್ಲಿ ಸಿಗದೆ ಹೋದರೆ, ಸರಿ ಸುಮಾರು 10,000 ರೂಪಾಯಿಗಳವರೆಗೆ ಫೈನ್ ಹಾಕುತ್ತಿದ್ದರು.
ಡಿಜಿಟಲ್ ವ್ಯವಸ್ಥೆಯಲ್ಲಿ ಪಾರದರ್ಶಕತೆ
ಆದರೆ, ಈಗ ರಾಜ್ಯ ಸರ್ಕಾರವು ಏಪ್ರಿಲ್ 1, 2026ರಿಂದ ಪಿಯುಸಿಸಿ ಮಾಹಿತಿಯನ್ನು ನೇರವಾಗಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್ಗೆ ಲಿಂಕ್ ಮಾಡುವ ಕ್ರಮ ಕೈಗೊಂಡಿದೆ. ಇದರ ಮೂಲಕ ವಾಹನಗಳ ಮಾಲಿನ್ಯ ಪ್ರಮಾಣಪತ್ರಗಳ ಮಾಹಿತಿ ದೇಶದಾದ್ಯಂತ ಲಭ್ಯವಾಗಲಿದ್ದು, ಡಿಜಿಟಲ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.
ಮನಿ ಕಂಟ್ರೋಲ್ ವರದಿ ಮಾಡಿರುವಂತೆ, ಹಳೆಯ PUCC ಪ್ರಮಾಣಪತ್ರಗಳನ್ನು ಹಂತ ಹಂತವಾಗಿ ಕೇಂದ್ರ ಸರ್ಕಾರದ ವಾಹನ್ ಪೋರ್ಟಲ್ಗೆ ಸೇರಿಸುವ ಕಾರ್ಯ ನಡೆಯಲಿದೆ. ಆದರೆ, ಹೊಸ ಪ್ರಮಾಣಪತ್ರಗಳು ಸ್ವಯಂಚಾಲಿತವಾಗಿಯೇ ವಾಹನ್ ಪೋರ್ಟಲ್ನಲ್ಲಿ ಅಪ್ಡೇಟ್ ಆಗಲಿವೆ. ಇದರಿಂದ ವಾಹನ ಮಾಲೀಕರು ತಮ್ಮ ವಾಹನದ ಮಾಹಿತಿಗಳನ್ನು ಬೇರೆ ಬೇರೆ ಕಡೆ ತೋರಿಸಬೇಕಾದ ಅಗತ್ಯ ಇರುವುದಿಲ್ಲ.
ವಾಹನ ಮಾಲೀಕರಿಗೇನು ಲಾಭ?
ಈ ಹೊಸ ವ್ಯವಸ್ಥೆಯಿಂದ ವಾಹನ ಮಾಲೀಕರಿಗೆ ಹಲವಾರು ಪ್ರಯೋಜನಗಳಿವೆ.
ಮೊದಲನೆಯದಾಗಿ, ಇತರ ರಾಜ್ಯಗಳಲ್ಲಿ ದಂಡ ಬೀಳುವ ಸಮಸ್ಯೆ ಕಡಿಮೆಯಾಗುತ್ತದೆ.
ಎರಡನೆಯದಾಗಿ, ವಾಹನದ ಎಲ್ಲಾ ದಾಖಲೆಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಾಗುವುದರಿಂದ ಇತರೆ ರಾಜ್ಯಗಳ ಪೊಲೀಸರ ಪರಿಶೀಲನೆಗೆ ಸುಲಭವಾಗುತ್ತದೆ. ಅದರಂತೆ, ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.
ಇದರೊಂದಿಗೆ, ನಿಮ್ಮ ವಾಹನದ ಮಾಲಿನ್ಯ ಪ್ರಮಾಣಪತ್ರದ ವಿವರಗಳು ಇನ್ನು ಮುಂದೆ ಎಂಪರಿವಾಹನ್ ಅಥವಾ ಡಿಜಿಲಾಕರ್ ಆಪ್ಗಳಲ್ಲಿಯೂ ಕಾಣಿಸಿಕೊಳ್ಳಲಿವೆ.
ಏತನ್ಮಧ್ಯೆ, ಕಳೆದ ಎರಡು ತಿಂಗಳಿನಿಂದ ನ್ಯೂಸ್ 18 ಸಹೋದರ ಸಂಸ್ಥೆ ಮನಿ ಕಂಟ್ರೋಲ್, ಬೇರೆ ರಾಜ್ಯಗಳಲ್ಲಿ ಕರ್ನಾಟಕದ ವಾಹನಗಳಿಗೆ ಅದರಲ್ಲೂ, ಪಿಯುಸಿಸಿ ಪ್ರಮಾಣ ಪತ್ರವಿದ್ದರೂ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ಫೈನ್ ಹಾಕಲಾಗುತ್ತಿತ್ತು. ಯಾಕೆಂದರೆ, ಕರ್ನಾಟಕದ ವಾಹನಗಳ ಮಾಲಿನ್ಯ ತಪಾಸಣಾ ಪ್ರಮಾಣಪತ್ರಗಳು ಕೇಂದ್ರದ ವಾಹನ್ ಪೋರ್ಟಲ್ಗೆ ಲಿಂಕ್ ಆಗಿರಲಿಲ್ಲ. ಇದರ ಪರಿಣಾಮ ಬೇರೆ ರಾಜ್ಯಗಳ ಪೊಲೀಸರಿಗೆ ಕರ್ನಾಟಕದ ವಾಹನಗಳ ಮಾಹಿತಿಗಳು ಸಿಗುತ್ತಿರಲಿಲ್ಲ. ಆದರೆ, ಇದೀಗ ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರವು ವಾಹನ ಮಾಲಿನ್ಯ ತಪಾಸಣಾ ಪ್ರಮಾಣಪತ್ರ ಸಿಗುವುದರಿಂದ ಇನ್ನು ಮುಂದೆ ಆ ಫೈನ್ ಬೀಳುವುದಿಲ್ಲ.
