ಹಾಸನ, ಏ.4: ಸಕಲೇಶಪುರ ತಾಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯದ ಸಮೀಪ ಇತ್ತೀಚೆಗೆ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಕ್ಷೇತ್ರದ ಪವಿತ್ರತೆ ಹಾಗೂ ಸ್ಥಳೀಯ ಸಂಪ್ರದಾಯಗಳ ರಕ್ಷಣೆಗೆ ಗ್ರಾಮ ಪಂಚಾಯಿತಿ ಅಧೀನದಲ್ಲಿ ಸಮಿತಿ ರಚಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ಬಳಿಕ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ದೇವಾಲಯಕ್ಕೆ ಪಾರಂಪರಿಕವಾಗಿ ಸಂಬಂಧ ಹೊಂದಿರುವ ಸುಮಾರು 9 ಗ್ರಾಮಗಳ ಕುಟುಂಬದವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಪವಿತ್ರತೆ ಕಾಪಾಡುವ ನಿಟ್ಟಿನಲ್ಲಿ ಪಂಚಾಯಿತಿ ಅಧ್ಯಕ್ಷರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದ್ದು, ತಹಸೀಲ್ದಾರ್ ಕೂಡ ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ ಎಂದು ಹೇಳಿದರು.
ಟ್ರೆಕ್ಕಿಂಗ್ಗೆ ಮಾರ್ಗಸೂಚಿ ಸಿದ್ಧತೆ
ಸಕಲೇಶಪುರ ತಾಲೂಕಿನ ಸುತ್ತಮುತ್ತ ಟ್ರೆಕ್ಕಿಂಗ್ ಚಟುವಟಿಕೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸೂಕ್ತ ಮಾರ್ಗಸೂಚಿಯೊಂದಿಗೆ ಟ್ರೆಕ್ಕಿಂಗ್ಗೆ ಅವಕಾಶ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
“ಯಾರೋ ಒಂದಿಬ್ಬರು ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಸರಿಯಲ್ಲ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಮತೋಲನದ ಕ್ರಮ ಕೈಗೊಳ್ಳಲಿವೆ” ಎಂದು ಅವರು ಸ್ಪಷ್ಟಪಡಿಸಿದರು.
