ರಾಮನಾಥಪುರ, ಏ.6 (RNP): ತಂಬಾಕು ಬೆಳೆಗಾರರಿಗೆ ಸೂಕ್ತ ಬೆಲೆ ನೀಡದೇ ತಂಬಾಕು ಮಂಡಳಿ ಹಾಗೂ ತಂಬಾಕು ಖರೀದಿ ಕಂಪನಿಗಳು ಬೆಳೆಗಾರರನ್ನು ವಂಚಿಸುತ್ತಿವೆ ಎಂದು ಆರೋಪಿಸಿ, ಇಲ್ಲಿನ ಸುಬ್ರಹ್ಮಣ್ಯನಗರದಲ್ಲಿರುವ ಪ್ಲಾಟ್ ಫಾರಂ 7 ಮತ್ತು 63ರ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಭಾರತೀಯ ತಾಲ್ಲೂಕು ರೈತ ಸಂಘ ಹಾಗೂ ತಂಬಾಕು ಬೆಳೆಗಾರರು ಸೋಮವಾರ ಮಧ್ಯಾಹ್ನದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಸೀಬಹಳ್ಳಿ ಯೋಗಣ್ಣ, ರಾಮನಾಥಪುರದ ತಂಬಾಕು ಮಂಡಳಿಯಲ್ಲಿ ವಹಿವಾಟು ಆರಂಭವಾಗಿ ಆರು ತಿಂಗಳು ಕಳೆದರೂ ಇನ್ನೂ ಅರ್ಧದಷ್ಟು ರೈತರ ತಂಬಾಕು ಮಾರಾಟವಾಗಿಲ್ಲ. ಬೆಳೆಗಾರರು ಮಂಡಳಿಗೆ ತರುವ ತಂಬಾಕಿಗೆ ಖರೀದಿ ಕಂಪನಿಗಳು ತಮಗೆ ಇಷ್ಟವಾದಂತೆ ದರ ನಿಗದಿಪಡಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ತಂಬಾಕು ಮಂಡಳಿ ರೈತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಅನ್ಯಾಯದ ವಿರುದ್ಧವೇ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಬಂಡಿಗನಹಳ್ಳಿ ರವಿ ಮಾತನಾಡಿ, ಕಳೆದ ವರ್ಷ ಅಕ್ಟೋಬರ್ 10ರಂದು ತಂಬಾಕು ವಹಿವಾಟು ಆರಂಭವಾಗಿದ್ದರೂ ಈವರೆಗೂ ಬೆಲೆ ಸ್ಥಿರತೆ ಕಂಡಿಲ್ಲ. ರೈತರು ಎಷ್ಟೇ ಧ್ವನಿ ಎತ್ತಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಹೀಗಾಗಿ ತಂಬಾಕು ಬೆಳೆಗಾರರು ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮನಾಥಪುರ ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಸುಮಾರು 50 ವರ್ಷಗಳಿಂದ ಉತ್ತಮ ದರ್ಜೆಯ ತಂಬಾಕು ಬೆಳೆಯಲಾಗುತ್ತಿದೆ. ತಂಬಾಕಿನಿಂದ ತಯಾರಾಗುವ ಉತ್ಪನ್ನಗಳ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ವಿದೇಶಿ ವಿನಿಮಯ ಹಾಗೂ ತೆರಿಗೆ ರೂಪದಲ್ಲಿ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತಿದ್ದರೂ, ಬೆಳೆಗಾರರಿಗೆ ಮಾತ್ರ ಬೆಲೆ ಸ್ಥಿರತೆ ಇಲ್ಲದಿರುವುದು ದುರಂತಕರ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತಕ್ಷಣ ತಂಬಾಕಿಗೆ ಬೆಲೆ ಸ್ಥಿರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ರೈತ ಸಂಘದ ಉಪಾಧ್ಯಕ್ಷ ಮಂಜೇಗೌಡ, ಹರಳಹಳ್ಳಿ ತಮ್ಮೇಗೌಡ, ಸಂಜು, ಜಗದೀಶ್, ರಮೇಶ್, ದೋರೆ, ವೇದಾನಂದ, ವೀರೇಂದ್ರ, ಮಂಜೇಗೌಡ, ಹಾಸನ ರೈತ ಮುಖಂಡರಾದ ಸಣ್ಣೇಗೌಡ, ರಮೇಶ್ ರಾಜು, ಸೋಮಶೇಖರ್, ಮಲ್ಲಪ್ಪ, ಚಂದ್ರಶೇಖರ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೊಣನೂರು ಠಾಣೆ ಪಿಎಸ್ಐ ಆರ್. ಮರಿಯಪ್ಪ ಬ್ಯಾಳಿ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
