ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು, ಕನ್ನಡಾಭಿಮಾನಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಾಡಪ್ರಭು ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕಾಳೇನಹಳ್ಳಿ ಆನಂದ್ ಕುಮಾರ್ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬಂದಿರುವುದಾಗಿ ತಿಳಿಸಿದರು. ಪ್ರಸ್ತುತ ತಾವು ಇತಿಹಾಸ ಪ್ರಸಿದ್ಧ ನವೋದಯ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಗತವೈಭವವನ್ನು ಮರಳಿ ತರಲು ನಿರ್ದೇಶಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಹಿತೈಷಿಗಳೊಂದಿಗೆ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಭಾಷೆ, ನೆಲ, ಜಲ ಹಾಗೂ ಕನ್ನಡದ ಅಸ್ಮಿತೆಯ ಪ್ರಶ್ನೆಗಳಲ್ಲಿ ಹೋರಾಟ ನಡೆಸಿದ್ದೇನೆ. ಅಲ್ಲದೆ ನೊಂದವರು, ದೀನ ದಲಿತರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಪರವಾಗಿ ವಿವಿಧ ಸಂಘ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ತಾವು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿ, ಈ ಕುರಿತು ಅಭಿಪ್ರಾಯ ಸಂಗ್ರಹ ಹಾಗೂ ಚರ್ಚೆಗಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದರು.
ಏಪ್ರಿಲ್ 8, 2026ರ ಬುಧವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಭೆ ನಡೆಯಲಿದ್ದು, ಕನ್ನಡ ಬಂಧುಗಳು, ಸಂಘ ಸಂಸ್ಥೆಗಳ ಮುಖಂಡರು, ಸಾಹಿತ್ಯಾಸಕ್ತರು ಮತ್ತು ಹಿತೈಷಿಗಳು ಭಾಗವಹಿಸಿ ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು ಎಂದು ಕಾಳೇನಹಳ್ಳಿ ಆನಂದ್ ಕುಮಾರ್ ಮನವಿ ಮಾಡಿದರು.
– ಮಂಜುನಾಥ್ ಐ.ಕೆ
